ಧಾರಾಶಿವ(ಮಹಾರಾಷ್ಟ್ರ): ಆಡಳಿತಾರೂಢ ಮಹಾಯುತಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಶಿವಬಾ ಸಂಘಟನೆಯ ನಾಯಕ ಮನೋಜ್ ಜಾರಂಗೆ ಪಾಟೀಲ್, ಮರಾಠಾ ಮೀಸಲಾತಿ ನೀಡದಿದ್ದರೆ ಚುನಾವಣಾ ರಾಜಕೀಯಕ್ಕಿಳಿದು ಅಧಿಕಾರಕ್ಕೇರುವುದೊಂದೇ ನಮಗೆ ಉಳಿದಿರುವ ಏಕೈಕ ಮಾರ್ಗ ಎಂದು ಎಚ್ಚರಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಾರಂಗೆ ಪಾಟೀಲ್, ವಾಸ್ತವದಲ್ಲಿ ಮರಾಠಾ ಸಂಘಟನೆಗಳು ರಾಜಕೀಯಕ್ಕೆ ಪ್ರವೇಶಿಸಲು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
"ಆದಾಗ್ಯೂ, ರಾಜ್ಯ ಸರ್ಕಾರವು ನಮಗೆ ಭರವಸೆ ನೀಡಿದಂತೆ ಮೀಸಲಾತಿ ನೀಡಲು ವಿಫಲವಾದರೆ, ನಮಗೆ ಉಳಿದಿರುವ ಏಕೈಕ ಆಯ್ಕೆಯೆಂದರೆ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರಕ್ಕೆ ಬರುವುದು... ನಂತರ ನಾವು ಸಮುದಾಯಕ್ಕೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ಜಾರಂಗೆ ಪಾಟೀಲ್ ಘೋಷಿಸಿದರು.
ಭಾರತೀಯ ಜನತಾ ಪಕ್ಷದವರಾದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ ಪಾಟೀಲ್, ಫಡ್ನವೀಸ್ ಸಮುದಾಯದ ಆಕಾಂಕ್ಷೆಗಳು ಈಡೇರದಂತೆ ತಡೆದಿದ್ದಾರೆ ಎಂದು ಆರೋಪಿಸಿದರು.
"ಉಪಮುಖ್ಯಮಂತ್ರಿ ಪಡ್ನವೀಸ್ ಅವರನ್ನು ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಅವರ ಮುಂದೆ ಮಂಡಿಸುವಂತೆ ಮತ್ತು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಕೋರುವಂತೆ ನಾನು ಎಲ್ಲಾ ರಾಜಕೀಯ ಪಕ್ಷದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ" ಎಂದು ಅವರು ಹೇಳಿದರು.
ಚುನಾವಣೆಗಳಲ್ಲಿ ಸ್ಪರ್ಧಿಸುವುದು ಮಾತ್ರವಲ್ಲದೆ ಆಡಳಿತಾರೂಢ ಮಹಾಯುತಿ ಮತ್ತು ವಿಪಕ್ಷಗಳ ಮೈತ್ರಿಕೂಟ ಮಹಾವಿಕಾಸ ಆಘಾಡಿಯ ಎಲ್ಲಾ ಅಭ್ಯರ್ಥಿಗಳನ್ನು ಸೋಲಿಸುವುದಾಗಿ ಜಾರಂಗೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಶೇಕಡಾ 100ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ನೀಡುವುದನ್ನು ಕಡ್ಡಾಯ ಮಾಡಿದರೆ ಮರಾಠಾ ಮೀಸಲಾತಿ ಅಗತ್ಯವೇ ಇಲ್ಲ ಎಂದು ಹೇಳುವ ಮೂಲಕ ರಾಜ್ ಠಾಕ್ರೆ ಸೋಮವಾರ ಭಾರೀ ರಾಜಕೀಯ ವಿವಾದ ಹುಟ್ಟುಹಾಕಿದ್ದಾರೆ. ನಾನು ಈ ಹಿಂದೆ ಇದೇ ಮಾತನ್ನು ಜಾರಂಗೆ ಪಾಟೀಲರಿಗೆ ಹೇಳಿದ್ದೆ ಮತ್ತು ಈಗ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆಯಾದರೂ, ಭವಿಷ್ಯದಲ್ಲಿ ನಾನು ಹೇಳಿದ್ದು ಸರಿ ಎಂದು ಸಾಬೀತಾಗಲಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಜಾರಂಗೆ ಪಾಟೀಲ್ ಪ್ರಸ್ತುತ ಧಾರಾಶಿವ್, ಸೋಲಾಪುರ, ಬೀಡ್, ಪುಣೆ ಮತ್ತು ಇತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ತಮ್ಮದೇ ಆದ ಕಾರಣಕ್ಕಾಗಿ ಧಾರಾಶಿವನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಅಧ್ಯಕ್ಷ ರಾಜ್ ಠಾಕ್ರೆ ಅವರನ್ನು ಜಾರಂಗೆ ಪಾಟೀಲ್ ಅವರು ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಬಾಂಗ್ಲಾದಲ್ಲಿರುವ ಹಿಂದೂಗಳನ್ನು ರಕ್ಷಿಸಬೇಕು: ಶಂಕರಾಚಾರ್ಯ ಸ್ವಾಮೀಜಿ - Shankaracharya Swamiji Request