ಮುಂಬೈ(ಮಹಾರಾಷ್ಟ್ರ): ಬುಧವಾರ ರಾತ್ರಿ ನಿಧನರಾದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥರು ಹಾಗೂ ಶ್ರೇಷ್ಠ ಸಮಾಜಸೇವಕರಾದ ರತನ್ ಟಾಟಾರ ಅಂತ್ಯಕ್ರಿಯೆ ಗುರುವಾರ ಸಂಜೆ ಮುಂಬೈನ ವರ್ಲಿಯಲ್ಲಿರುವ ಪಾರ್ಸಿ ಚಿತಾಗಾರದಲ್ಲಿ ನಡೆಯಿತು. ಅಂತ್ಯಕ್ರಿಯೆಗೂ ಮುನ್ನ ಸಕಲ ಸರ್ಕಾರಿ ಗೌರವ ನೀಡಲಾಯಿತು. ಸರ್ವಧರ್ಮದ ಗುರುಗಳಿಂದ ಪ್ರಾರ್ಥನೆ ನಡೆಯಿತು. ಆ ಬಳಿಕ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಕುಟುಂಬಸ್ಥರು, ಅಭಿಮಾನಿಗಳು, ಗಣ್ಯರು ಉಪಸ್ಥಿತರಿದ್ದರು.
ಟಾಟಾರ ಅಂತ್ಯಕ್ರಿಯೆ ಹೇಗೆ ನಡೆಯುತ್ತದೆ ಎಂಬ ಕುರಿತು ಸಹಜ ಕುತೂಹಲವಿತ್ತು. ಏಕೆಂದರೆ ಪಾರ್ಸಿ ಪದ್ಧತೆ ಹಿಂದೂ, ಮುಸ್ಲಿಂ, ಕ್ರೈಸ್ತರಿಗಿಂತ ಭಿನ್ನ. ಸ್ಮಶಾನವನ್ನು 'ದಖ್ಮಾ' ಅಥವಾ 'ಟವರ್ ಆಫ್ ಸೈಲೆನ್ಸ್' ಎಂದು ಸಂಬೋಧಿಸುವ ಇವರು, ಇಲ್ಲಿ ಯಾರಾದರೂ ಮೃತಪಟ್ಟರೆ ಭೌತಿಕ ದೇಹ ಶುದ್ಧೀಕರಿಸುವ ಪ್ರಕ್ರಿಯೆ ಮಾಡುತ್ತಾರೆ. ಮಾನವನ ದೇಹ ಪ್ರಕೃತಿಯ ಕೊಡುಗೆ. ಸತ್ತ ಬಳಿಕ ದೇಹವನ್ನು ಮರಳಿ ಪ್ರಕೃತಿಗೆ ಅರ್ಪಣೆ ಮಾಡುವ ಸಂಪ್ರದಾಯ ಪಾರ್ಸಿ ಧರ್ಮದ್ದು. ಮನುಷ್ಯ ಸತ್ತ ನಂತರ ಪುನಃ ಪ್ರಕೃತಿಯ ಪಾಲಾಗಬೇಕು. ಅಗ್ನಿಸ್ಪರ್ಶ ಮತ್ತು ಸಮಾಧಿ ಮಾಡುವುದರಿಂದ ನೀರು, ಗಾಳಿ ಮತ್ತು ಬೆಂಕಿಯಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಕಲುಷಿತಗೊಳಿಸಿದಂತಾಗುತ್ತದೆ ಎಂಬುದು ಅವರ ನಂಬಿಕೆ.
ಮೃತದೇಹದ ಅಂತ್ಯಕ್ರಿಯೆಗೂ ಮುನ್ನ ಪಾರ್ಸಿ ಸಂಪ್ರದಾಯದ ಪ್ರಕಾರ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನಂತರ ದೇಹವನ್ನು ಶವಸಂಸ್ಕಾರಕ್ಕಾಗಿ ಗೊತ್ತುಪಡಿಸಿದ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಈ ಸ್ಥಳವನ್ನು 'ಟವರ್ ಆಫ್ ಸೈಲೆನ್ಸ್' ಅಥವಾ 'ದಖ್ಮಾ' ಎಂದು ಕರೆಯುತ್ತಾರೆ. ಇಲ್ಲಿ ಶವವನ್ನು ರಣಹದ್ದುಗಳು ಬಂದು ತಿನ್ನಲು ಇಡಲಾಗುತ್ತದೆ. ಪ್ರಕೃತಿಯಿಂದ ಬಂದ ದೇಹ ಪುನಃ ಪ್ರಕೃತಿಯ ಮಡಿಲು ಸೇರಬೇಕು ಎನ್ನುವುದು ಪಾರ್ಸಿ ಧರ್ಮೀಯರ ನಂಬಿಕೆ.
ಆದರೆ, ಇತ್ತೀಚೆಗೆ ಹದ್ದುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ದಖ್ಮಾ ಶೈಲಿಯ ಅಂತ್ಯಕ್ರಿಯೆಗಳು ಕಷ್ಟ. ಹಾಗಾಗಿ ತಮ್ಮ ಸಂಪ್ರದಾಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಪಾರ್ಸಿಗಳು, ಸೌರ ಅಥವಾ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಅದೇ ರೀತಿ ಪಾರ್ಸಿ ಸಂಪ್ರದಾಯದಂತೆ ಟಾಟಾ ಅವರ ಅಂತ್ಯಕ್ರಿಯೆ ನೆರವೇರಿತು.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ರತನ್ ಟಾಟಾ; ಕೊಡುಗೈ ದಾನಿಯ ಕೊಡುಗೆ ಬಗ್ಗೆ ನಿಮಗೆಷ್ಟು ಗೊತ್ತು?