ಇಟಾ(ಉತ್ತರ ಪ್ರದೇಶ): ಹತ್ರಾಸ್ ರತಿಭಾನಪುರದ ಫುಲ್ರೈ ಗ್ರಾಮದಲ್ಲಿ ನಡೆದ ಧಾರ್ಮಿಕ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ 116 ಜನರು ಸಾವನ್ನಪ್ಪಿದ್ದಾರೆ. ಸತ್ಸಂಗದಲ್ಲಿ ಸಂತ ಭೋಲೆ ಬಾಬಾ ಪ್ರವಚನ ನೀಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಈಗ ಭೋಲೆ ಬಾಬಾ ಯಾರು?, ಅವರ ಹಿನ್ನೆಲೆ ಏನು? ಎಂಬ ಪ್ರಶ್ನೆಗಳು ಸದ್ಯ ಜನರನ್ನು ಕಾಡುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಬಾಬಾ ಮೂಲತಃ ಕಾಸ್‌ಗಂಜ್ ಜಿಲ್ಲೆಯ ಪಟಿಯಾಲಿಯ ಬಹದ್ದೂರ್‌ನಗರದವರು, ಅವರ ಹೆಸರು ಸಕರ್ ವಿಶ್ವ ಹರಿ. ಇವರು ಬಾಬಾ ಆಗುವುದಕ್ಕೂ ಮೊದಲು ಪೊಲೀಸ್ ಗುಪ್ತಚರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ, ಅವರು ಕೆಲಸವನ್ನು ತೊರೆದು ಕಥೆಗಾರರಾಗುವ ಮೂಲಕ ಭಕ್ತರ ಸೇವೆ ಪ್ರಾರಂಭಿಸಿದರು. ಅವರು ತಮ್ಮ ಹೆಂಡತಿಯೊಂದಿಗೆ ಸತ್ಸಂಗವನ್ನು ನಡೆಸುತ್ತಾರೆ. ಇವರು ಪಟಿಯಾಲಿದಲ್ಲಿ ಸಕರ್ ವಿಶ್ವ ಹರಿ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಅವರ ಸತ್ಸಂಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಸತ್ಸಂಗದಲ್ಲಿ ಭೋಲೆ ಬಾಬಾರವರ ಅವರ ಧರ್ಮೋಪದೇಶ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಾಗ ಈ ದುರಂತ ನಡೆದಿದೆ. ಸಂಘಟಕರು ಜಿಲ್ಲಾಡಳಿತಕ್ಕೆ ತಿಳಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ತಲುಪಿದ್ದರು ಎಂದು ಹೇಳಲಾಗುತ್ತಿದೆ. ಸಮಾರೋಪ ಸಮಾರಂಭದಲ್ಲಿ ಜನಸಂದಣಿಯಿಂದ ಅನೇಕ ಜನರು ಉಸಿರುಗಟ್ಟಿದರು, ನಂತರ ನೂರಾರು ಜನರು ಕಾಲ್ತುಳಿತದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಸದ್ಯ ಸಾವಿನ ಸಂಖ್ಯೆ 100ರ ಗಡಿ ದಾಟಿದೆ ಎಂದು ಹೇಳಲಾಗುತ್ತಿದೆ.
ಕರೋನಾ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದ ಬಾಬಾ: ಕರೋನಾ ಸಮಯದಲ್ಲಿ, ಭೋಲೆ ಬಾಬಾ ಅವರ ಸತ್ಸಂಗ ಕಾರ್ಯಕ್ರಮವು ವಿವಾದಕ್ಕೆ ಒಳಗಾಗಿತ್ತು. ಆಗ ಅವರು ತಮ್ಮ ಸತ್ಸಂಗದಲ್ಲಿ ಕೇವಲ 50 ಮಂದಿಗೆ ಮಾತ್ರ ಅನುಮತಿ ಕೋರಿದ್ದರು. ಆದರೆ, ಬರ ಬರುತ್ತಾ ಅವರ ಸತ್ಸಂಗಕ್ಕೆ 50 ಸಾವಿರಕ್ಕೂ ಹೆಚ್ಚು ಜನ ಸೇರುತ್ತಿದ್ದರು. ಭೋಲೆ ಬಾಬಾ ಇಟಾಹ್, ಆಗ್ರಾ, ಮೈನ್‌ಪುರಿ, ಷಹಜಹಾನ್‌ಪುರ, ಹತ್ರಾಸ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿಯೂ ಹೆಸರು ವಾಸಿಯಾಗಿದ್ದಾರೆ. ಇದಲ್ಲದೇ, ಮಧ್ಯಪ್ರದೇಶದ ಪಶ್ಚಿಮ ಯುಪಿ, ರಾಜಸ್ಥಾನ, ಹರಿಯಾಣಕ್ಕೆ ಹೊಂದಿಕೊಂಡಿರುವ ಹಲವು ಜಿಲ್ಲೆಗಳಲ್ಲಿ ಅವರು ಪ್ರವಚನ ನೀಡುತ್ತಾರೆ.
ಭೋಲೆ ಬಾಬಾರ ಹೆಚ್ಚಿನ ಭಕ್ತರು ಬಡ ವರ್ಗದವರಾಗಿದ್ದಾರೆ, ಅವರ ಸತ್ಸಂಗವನ್ನು ಕೇಳಲು ಲಕ್ಷಗಟ್ಟಲೆ ಭಕ್ತರು ಬರುತ್ತಾರೆ. ಸಕರ್ ವಿಶ್ವ ಹರಿಯು ತನ್ನನ್ನು ತಾನು ದೇವರ ಸೇವಕನೆಂದು ಕರೆದುಕೊಂಡರೂ ಸಹ, ಆತನ ಭಕ್ತರು ಬಾಬಾರನ್ನು ದೇವರ ಅವತಾರ ಎಂದು ಪರಿಗಣಿಸುತ್ತಾರೆ, ಅವರು ಸತ್ಸಂಗದ ವ್ಯವಸ್ಥೆಯನ್ನು ಸ್ವತಃ ನೋಡಿಕೊಳ್ಳುತ್ತಾರೆ.
ಭೋಲೆ ಬಾಬಾ ಅವರ ಸತ್ಸಂಗಕ್ಕೆ ಹೋಗುವ ಭಕ್ತರಿಗೆ ನೀರು ವಿತರಿಸಲಾಗುತ್ತದೆ. ಈ ನೀರು ಕುಡಿಯುವುದರಿಂದ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಬಾಬಾ ಅವರ ಅನುಯಾಯಿಗಳು ನಂಬುತ್ತಾರೆ. ಪಟಿಯಾಲದ ಬಹದ್ದೂರ್ ನಗರ ಗ್ರಾಮದಲ್ಲಿರುವ ಆಶ್ರಮದಲ್ಲಿ ಬಾಬಾ ದರ್ಬಾರ್ ನಡೆಸುತ್ತಿದ್ದಾರೆ. ಆಶ್ರಮದ ಹೊರಗೆ ಹ್ಯಾಂಡ್ ಪಂಪ್ ಕೂಡ ಇದೆ. ದರ್ಬಾರ್ ಸಮಯದಲ್ಲಿ, ಈ ಹ್ಯಾಂಡ್ ಪಂಪ್ ನಿಂದ ನೀರು ಕುಡಿಯಲು ಉದ್ದನೆಯ ಸರತಿ ಸಾಲು ಇರುತ್ತದೆ.