ನವದೆಹಲಿ: ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ಬಳಿಕ ಮುಂದೆ ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಎಎಪಿ ಸರ್ಕಾರದ ಪ್ರಭಾವಿ ಸಚಿವೆಯಾಗಿ ಗುರುತಿಸಿಕೊಂಡಿರುವ ಆತಿಶಿ ಮರ್ಲೆನಾ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಯಾರಿವರು ಆತಿಶಿ?: 1981 ಜೂನ್ 8ರಂದು ಜನಿಸಿದ ಆತಿಶಿ ಮಾರ್ಲೆನ್ ಸಿಂಗ್ ದೆಹಲಿ ಯೂನಿವರ್ಸಿಟಿಯ ಪ್ರೊ.ವಿಜಯ್ ಸಿಂಗ್ ಮತ್ತು ತೃಪ್ತಿ ವಹಿ ದಂಪತಿಯ ಪುತ್ರಿ. ದೆಹಲಿಯಲ್ಲಿ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣ ಪೂರೈಸಿದ್ದಾರೆ. ಸೇಂಟ್ ಸ್ಟೀಫನ್ಸ್ ಕಾಲೇಜ್ನಲ್ಲಿ 2001ರಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಪಡೆದ ಇವರು ಉನ್ನತ ವಿದ್ಯಾಭ್ಯಾಸವನ್ನು ಆಕ್ಸ್ಫರ್ಡ್ ಯೂನಿವರ್ಟಿಸಿಯಲ್ಲಿ ಪೂರೈಸಿದ್ದಾರೆ.
ರಾಜಕೀಯ ಪ್ರವೇಶ ಹೇಗಾಯ್ತು?: 2013ರಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಸೇರಿದ ಆತಿಶಿ, ಪಕ್ಷದ ನೀತಿ ನಿರೂಪಣೆಯಲ್ಲಿ ಸಕ್ರಿಯವಾಗಿ ಭಾಗಿಯಾದರು. ದೆಹಲಿಯ ಶೈಕ್ಷಣಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದನ್ನು ಗಮನಿಸಿ 2015ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇವರನ್ನು ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಾಗಿದ್ದ ಮನೀಷ್ ಸಿಸೋಡಿಯಾ ಅವರ ಸಲಹೆಗಾರರನ್ನಾಗಿ ನೇಮಿಸಿತು. ಆದಾಗ್ಯೂ 2018ರಲ್ಲಿ ಇವರನ್ನು ಈ ಹುದ್ದೆಯಿಂದ ತೆಗೆದು ಹಾಕಲಾಯಿತು. ಎಎಪಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದ ಸಂದರ್ಭದಲ್ಲಿ ಆತಿಶಿ ಸೇರಿದಂತೆ ಪಕ್ಷದ 8 ಇತರೆ ಸದಸ್ಯರ ನೇಮಕಾತಿಯನ್ನು ರದ್ದುಪಡಿಸಲಾಯಿತು.
ರಾಜಕೀಯ ವರ್ಚಸ್ಸು: 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಆತಿಶಿ ಅವರನ್ನು ಕಣಕ್ಕಿಳಿಸಲಾಯಿತು. ಕಾಂಗ್ರೆಸ್ ನಾಯಕ ಅರವಿಂದರ್ ಸಿಂಗ್ ಲವ್ಲಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ದ ಪ್ರಬಲ ಅಭ್ಯರ್ಥಿಯಾಗಿ ಇವರು ಗುರುತಿಸಿಕೊಂಡರು. ಆದರೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಇದಾದ ಬಳಿಕ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಲ್ಕಜಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಸಂಪುಟದ ಪ್ರಭಾವಿ ಸಚಿವೆಯಾಗಿ ಗುರುತಿಸಿಕೊಂಡರು. 2020ರ ಚುನಾವಣೆಯ ಬಳಿಕ ರಾಜಕೀಯವಾಗಿ ತಮ್ಮ ವರ್ಚಸ್ಸು ವೃದ್ಧಿಸಿಕೊಂಡಿದ್ದ ಆತಿಶಿ ಅವರನ್ನು ಆಮ್ ಆದ್ಮಿ ಪಕ್ಷದ ಗೋವಾ ಘಟಕದ ಉಸ್ತುವಾರಿಯಾಗಿ ನೇಮಿಸಲಾಯಿತು. ನಂತರದಲ್ಲಿ ಕೇಜ್ರಿವಾಲ್ ನಂಬಿಕಸ್ಥ ಪಾಳೆಯದಲ್ಲಿ ಗುರುತಿಸಿಕೊಂಡು, ಇಂದು ಮುಖ್ಯಮಂತ್ರಿ ಗಾದಿ ತಲುಪಿದ್ದಾರೆ.
ದೆಹಲಿ ಶಾಲೆಗಳ ಮೂಲಸೌಕರ್ಯ ಸುಧಾರಣೆ: ಎಎಪಿ ಸೇರುವ ಮುನ್ನ ಆತಿಶಿ ಆಂಧ್ರ ಪ್ರದೇಶದಲ್ಲಿ ಕೆಲಕಾಲ ರಿಶಿ ವ್ಯಾಲಿ ಶಾಲೆಯಲ್ಲಿ ಇತಿಹಾಸ ಮತ್ತು ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ದೆಹಲಿಯ ಸರ್ಕಾರಿ ಶಾಲೆಗಳ ಪುನರುಜ್ಜೀವನದಲ್ಲಿ ಇವರ ಪಾತ್ರ ಹಿರಿದು. ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲಾ ನಿರ್ವಹಣಾ ಸಮಿತಿ ರಚನೆ, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕುವ ನೀತಿ ಬಲಪಡಿಸುವಿಕೆಯಂತಹ ಹಲವು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಆಯ್ಕೆ