ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ 'ಪಾರ್ಟಿ ಕಲ್ಚರ್' ಅಗಾಧವಾಗಿ ಬೆಳೆಯುತ್ತಿದೆ. ಸಂದರ್ಭ ಏನೇ ಇರಲಿ, ಯುವಜನತೆ ಅದನ್ನು ವಿಜೃಂಭಣೆಯಿಂದ ಆಚರಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆದರಲ್ಲೂ ಕೆಲ ಸಿರಿವಂತರು ಪಾರ್ಟಿಗಳಿಗೆ ದಾಸರಾಗುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಸದ್ಯ ಈಗ ತೆಲುಗು ರಾಜ್ಯಗಳು ಸೇರಿದಂತೆ ಇತರ ರಾಜ್ಯಗಳಲ್ಲಿ 'ರೇವ್ ಪಾರ್ಟಿ' ಎಂಬ ಪದ ಜನಪ್ರಿಯವಾಗುತ್ತಿದೆ.
ಅದಕ್ಕೆ ಕಾರಣ, ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರರಂಗದ ಕೆಲವರು ಭಾಗವಹಿಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವುದು. ಆದರೆ, ಈ ಹಿಂದೆಯೂ ಇತರ ಚಿತ್ರರಂಗದ ಅನೇಕರು ರೇವ್ ಪಾರ್ಟಿ ಮಾಡುವಾಗ ಸಿಕ್ಕಿಬಿದ್ದಿದ್ದರು. ಸೆಲೆಬ್ರಿಟಿಗಳೇ ಏಕೆ ಹೆಚ್ಚಾಗಿ ಇಂತಹ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ?. ಈ ರೇವ್ ಪಾರ್ಟಿ ಎಂದರೇನು?. ಈ ಪಾರ್ಟಿಗಳಲ್ಲಿ ಏನು ಮಾಡುತ್ತಾರೆ? ಪೊಲೀಸರು ಪಬ್ಗಳ ಮೇಲೆ ದಾಳಿ ನಡೆಸುವ ಬದಲು ರೇವ್ ಪಾರ್ಟಿಗಳ ಮೇಲೆಯೇ ಏಕೆ ದಾಳಿ ಮಾಡುತ್ತಾರೆ? ಎಂಬ ಪ್ರಶ್ನೆಗಳಿಗೆ ನೆಟಿಜನ್ಸ್ ಉತ್ತರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಪಾರ್ಟಿ ಕಲ್ಚರ್ 1950ರ ದಶಕದಲ್ಲಿ ಇಂಗ್ಲೆಂಡ್ನಲ್ಲಿ ಪ್ರಾರಂಭವಾಯಿತು. ಅದರ ನಂತರ, ಇದು ಪ್ರಪಂಚದಾದ್ಯಂತ ವಿಸ್ತರಿಸಿತು. ಈ ಪಾರ್ಟಿಯಲ್ಲಿ ಸಾಮಾನ್ಯವಾಗಿ ಜನರು ಸಂಗೀತ ಮತ್ತು ನೃತ್ಯವನ್ನು ಆಸ್ವಾದಿಸುತ್ತಿದ್ದರು. ನಂತರ ಈ ಪಾರ್ಟಿಗಳಲ್ಲಿ ಲೈವ್ ಆಗಿ ಸಂಗೀತಗಾರರು ಸಂಗೀತ ಪ್ರದರ್ಶನ ನೀಡುತ್ತಿದ್ದರು. ಅದಾದ ನಂತರ ಪಾರ್ಟಿ ಕಲ್ಚರ್ ಹೊಸ ರೂಪ ಪಡೆಯಿತು. ಸಂಪೂರ್ಣವಾಗಿ ಮುಚ್ಚಿದ ಸ್ಥಳದಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು, ಮದ್ಯ ಸೇವಿಸುತ್ತಾ ಪಾರ್ಟಿಯನ್ನು ಆಸ್ವಾದಿಸುವ ಪದ್ಧತಿ ಬಂತು.
ರೇವ್ ಪಾರ್ಟಿ ಎಂದರೇನು?: ತುಂಬಾ ಅತ್ಯುತ್ಸಾಹದಿಂದ ಮಾಡುವ ಪಾರ್ಟಿಗಳನ್ನು 'ರೇವ್' ಎಂದು ಕರೆಯಲು ಪ್ರಾರಂಭಿಸಲಾಯಿತು. ರೇವ್ ಎಂಬ ಪದವು ಜಮೈಕಾದ ಭಾಷೆಯಿಂದ ಬಂದಿದೆ. ಆದರೆ, ಮದ್ಯ ಸೇವಿಸಿತ್ತಾ, ಡ್ಯಾನ್ಸ್ ಮಾಡುತ್ತಾ ಪಾರ್ಟಿ ಮಾಡುವುದೇ ಬೇರೆ. ಈ ರೇವ್ ಪಾರ್ಟಿಗಳೇ ಬೇರೆ. ರೇವ್ ಪಾರ್ಟಿಯಲ್ಲಿ ಭಾಗವಹಿಸುವವರನ್ನು ರೇವರ್ಸ್ ಎಂದು ಕರೆಯಲಾಗುತ್ತದೆ. ಕ್ರಮೇಣ ಈ ರೇವ್ ಪಾರ್ಟಿ ಸಂಸ್ಕೃತಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕೇರ್ ಆಫ್ ಅಡ್ರೆಸ್ ಆಗಿ ಮಾರ್ಪಟ್ಟಿತು. ಇಲ್ಲಿ ಆಂಫೆಟಮೈನ್, ಎಲ್‌ಎಸ್‌ಡಿ, ಕೆಟಮೈನ್, ಮೆಥಾಂಫೆಟಮೈನ್, ಕೊಕೇನ್ ಮತ್ತು ಗಾಂಜಾದಂತಹ ಮಾದಕ ವಸ್ತುಗಳನ್ನು ಗೌಪ್ಯವಾಗಿ ಬಳಸಲಾರಂಭಿಸಿದರು.
ಏತನ್ಮಧ್ಯೆ, ಈ ಪಾರ್ಟಿಗಳನ್ನು 24 ಗಂಟೆಗಳಿಂದ ಮೂರು ದಿನಗಳವರೆಗೆ ನಡೆಸಲಾಗುತ್ತದೆ. ಆದರೆ, ರೇವ್ ಪಾರ್ಟಿಗೆ ಪರಿಚಯಸ್ಥರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ರೇವ್ ಪಾರ್ಟಿಗಳಲ್ಲಿ ಹೊಸಬರಿಗೆ ಅವಕಾಶವಿರುವುದಿಲ್ಲ. ಈ ಪಾರ್ಟಿಗೆ ಹೊಸಬರನ್ನು ಆಹ್ವಾನಿಸಿದರೇ ಇಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಬಹಿರಂಗವಾಗುತ್ತದೆ ಎಂದು ಅವರನ್ನು ಕರೆಯುವುದಿಲ್ಲ.
ಆದರೆ, ಇಂತಹ ಅಕ್ರಮ ರೇವ್ ಪಾರ್ಟಿಗಳು ನಡೆಯುತ್ತಿವೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕರೆ ತಕ್ಷಣ ದಾಳಿ ನಡೆಸಿ, ಪಾರ್ಟಿಯಲ್ಲಿ ಪಾಲ್ಗೊಂಡವರನ್ನು ವಶಕ್ಕೆ ಪಡೆದು ಆಯೋಜಕರನ್ನು ಬಂಧಿಸುತ್ತಾರೆ. ಈ ಪಾರ್ಟಿಗಳಿಂದ ಡ್ರಗ್ಸ್ ಬಳಕೆ ವಿಪರೀತವಾಗಿ ಹೆಚ್ಚಾದ ಕಾರಣ ಪೊಲೀಸರು ಈ ರೇವ್ ಪಾರ್ಟಿಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಇಷ್ಟಾದರೂ ಈ ರೇವ್ ಪಾರ್ಟಿ ಸಂಸ್ಕೃತಿಯಿಂದ ಹೊರ ಬರಲು ಕೆಲ ಸೆಲೆಬ್ರಿಟಿಗಳಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಘಟನೆಯೇ ಉದಾಹರಣೆಯಾಗಿದೆ.
ಇದನ್ನೂ ಓದಿ: ಅಧಿಕಾರಿಗಳು, ಪೊಲೀಸರ ಎದುರೇ ಮತಯಂತ್ರ ನೆಲಕ್ಕೆ ಕುಕ್ಕಿ ಹಾಳುಗೆಡವಿದ ವೈಎಸ್ಆರ್ಸಿಪಿ ಶಾಸಕ - MLA Knocks down VVPAT