ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಬಗ್ಗೆ ವರದಿಯಾಗಿದೆ. ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಇದೀಗ ಮಕ್ಕಳ ಮೇಲಿನ ದೌರ್ಜನ್ಯ ಕುರಿತು ದೂರುಗಳ ಪರಿಶೀಲನೆ ಮತ್ತು ಸಂತ್ರಸ್ತರ ಸಮಸ್ಯೆ ಆಲಿಸಲು ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆರು ಸದಸ್ಯರ ತಂಡ ಭೇಟಿ ನೀಡಿದೆ.
ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಶಾಜಹಾನ್ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಒಂದು ತಿಂಗಳ ಇದೇ ಹಗರಣದ ತನಿಖೆಗೆಂದು ಸಂದೇಶಖಾಲಿ ಎಂಬ ಗ್ರಾಮದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸದ್ಯ ಶೇಖ್ ಶಾಜಹಾನ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆದರೆ, ಇಡಿ ದಾಳಿ ನಂತರದಿಂದ ಸಂದೇಶಖಾಲಿಯಲ್ಲಿ ಉದ್ವಿಗ್ನತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ವರದಿಗಳು ಆಗಿವೆ.
ಅಲ್ಲದೇ, ಗ್ರಾಮಸ್ಥರ ಮೇಲೆ ಕೆಲವು ಟಿಎಂಸಿ ನಾಯಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ. ಇದು ರಾಜಕೀಯ ಸಂಘರ್ಷಕ್ಕೂ ಕಾರಣವಾಗಿದೆ. ಗ್ರಾಮಸ್ಥರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ಸಹ ನಡೆದಿದೆ. ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಇದರ ನಡುವೆ ಶುಕ್ರವಾರ ಸಂದೇಶಖಾಲಿಯಲ್ಲಿ ದುಷ್ಕರ್ಮಿಗಳು ಏಳು ತಿಂಗಳ ಮಗುವನ್ನು ತಾಯಿಯ ಮಡಿಲಿಂದ ಕಿತ್ತು ಹೊರ ಎಸೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಮಗುವನ್ನು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶನಿವಾರ ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ತುಲಿಕಾ ದಾಸ್ ನೇತೃತ್ವದ ಆರು ಸದಸ್ಯರ ತಂಡವು ಸಂದೇಶಖಾಲಿಗೆ ಭೇಟಿ ಕೊಟ್ಟಿದೆ.
ರಾಜ್ಯ ಮಕ್ಕಳ ಹಕ್ಕುಗಳ ಸಮಿತಿಯ ಸಲಹೆಗಾರ್ತಿ ಸುಧೇಶ್ನಾ ರಾಯ್ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಪ್ರತಿ ಮಗುವಿಗೆ ರಕ್ಷಣೆ ನೀಡುವುದು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಸಂದೇಶಖಾಲಿಯಲ್ಲಿ ಶುಕ್ರವಾರ ಯಾರೋ ಒಬ್ಬರು ಮನೆಗೆ ನುಗ್ಗಿ ಮಗುವನ್ನು ತಾಯಿಯ ಮಡಿಲಿಂದ ಎಸೆದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಮಗುವಿನ ತಾಯಿಯಿಂದ ನಾವು ಮಾಹಿತಿ ಪಡೆಯಲು ಬಂದಿದ್ದೇವೆ ಎಂದು ತಿಳಿಸಿದರು. ಇದಕ್ಕೂ ಮುನ್ನ ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಪ್ರತಿನಿಧಿಗಳೂ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳ ಪಡಿತರ ಹಗರಣ ಪ್ರಕರಣ: ಸಚಿವ ಸ್ಥಾನದಿಂದ ಜ್ಯೋತಿಪ್ರಿಯಾ ಮಲ್ಲಿಕ್ ವಜಾ