ವಯನಾಡು (ಕೇರಳ): ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ 4,04,619 ಮತಗಳ ಭಾರೀ ಅಂತರದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲವು ಸಾಧಿಸಿದ್ದಾರೆ. ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ ಈ ವರ್ಷದ ಆರಂಭದಲ್ಲಿ ವಯನಾಡು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಅವರು ಗಳಿಸಿದ್ದ ಮತಗಳ ಅಂತರವನ್ನು ಮೀರಿ ಪ್ರಿಯಾಂಕಾ ಗಾಂಧಿ ಅವರು ವಿಜಯ ಪತಾಕೆ ಹಾರಿಸಿದ್ದಾರೆ.
ವಯನಾಡು ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಫಲಿತಾಂಶದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿತ್ತು. ಸಂಪೂರ್ಣ ಮತ ಎಣಿಕೆ ಬಳಿಕ ಪ್ರಿಯಾಂಕಾ ಗಾಂಧಿ ಅವರು 6,12,020 ಮತಗಳನ್ನು ಪಡೆದರೆ, ಸಿಪಿಐ(ಎಂ) ಅಭ್ಯರ್ಥಿ ಸತ್ಯನ್ ಮೊಕೆರಿ ಅವರು 2,07,401 ಹಾಗೂ ಬಿಜೆಪಿಯ ನವ್ಯಾ ಹರಿದಾಸ್ 1,08,080 ಮತಗಳನ್ನು ಪಡೆದಿದ್ದಾರೆ.
ಈ ಮೂಲಕ ಸಿಪಿಐ(ಎಂ) ಅಭ್ಯರ್ಥಿ ವಿರುದ್ಧ 4,04,619 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ವಯನಾಡ್ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು 6,47,445 ಮತಗಳನ್ನು ಗಳಿಸಿ, 3,64,422 ಮತಗಳ ಅಂತರದಿಂದ ಸಿಪಿಐ ಅಭ್ಯರ್ಥಿ ಅನ್ನಿ ರಾಜ ಅವರ ವಿರುದ್ಧ ಜಯಗಳಿಸಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ 7,06,367 ಮತಗಳನ್ನು ಪಡೆದು, 4,31,770 ಮತಗಳಿಂದ ಜಯಭೇರಿ ಬಾರಿಸಿದ್ದರು.
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡ್ ಹಾಗೂ ರಾಯ್ ಬರೇಲಿ LS ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ರಾಹುಲ್ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಕಾರಣ, ವಯನಾಡು ಕ್ಷೇತ್ರ ತೆರವಾಗಿತ್ತು. ಆ ಹಿನ್ನೆಲೆ ನಡೆದ ಉಪ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದರು.
ಇದನ್ನೂ ಓದಿ: ವಯನಾಡು ಲೋಕಸಭಾ ಉಪಚುನಾವಣೆ: ಇಂದು ಪ್ರಿಯಾಂಕಾ ಗಾಂಧಿ ಭವಿಷ್ಯ ನಿರ್ಧಾರ