ವಯನಾಡ್(ಕೇರಳ): ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ಸರಣಿ ಭೂಕುಸಿತದಲ್ಲಿ ಕ್ಷಣಕ್ಷಣಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಮಂಗಳವಾರದಿಂದ ಇದುವರೆಗೆ ಮೃತರ ಸಂಖ್ಯೆ 164ಕ್ಕೆ ಏರಿಕೆ ಕಂಡಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಅಂದಾಜು 3 ಸಾವಿರ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
300ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶ: ಮೆಪ್ಪಾಡಿ, ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಸೋಮವಾರ-ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಭಾರೀ ಭೂಕುಸಿತ ಉಂಟಾಯಿತು. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶಗಳಲ್ಲಿ 300ಕ್ಕೂ ಹೆಚ್ಚು ಮನೆಗಳು ಸಂಪೂರ್ಣವಾಗಿ ನಾಶವಾಗಿದೆ. ಕೆಲವೆಡೆ ಮನೆಗಳಿದ್ದವು ಎಂಬ ಕುರುಹು ಕೂಡಾ ಸಿಗದಷ್ಟು ಮಣ್ಣು ಹಾಗು ನೀರುಪಾಲಾಗಿವೆ. ಈ ಪ್ರದೇಶದಲ್ಲಿದ್ದ 180ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಕೆಲವರು ತಮ್ಮ ಕಣ್ಣೆದುರೇ ಕುಟುಂಬ ಸದಸ್ಯರು ಕೆಸರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ಕಂಡು ಕೊರಗಿದ್ದಾರೆ.
ಇದನ್ನೂ ಓದಿ: ವಯನಾಡ್ ಭೂಕುಸಿತ: ಸೇನೆಯಿಂದ ರಕ್ಷಣಾ ಕಾರ್ಯಕ್ಕೆ ಇಂಜಿನಿಯರಿಂಗ್ ಉಪಕರಣಗಳು, ಶ್ವಾನ ತಂಡ ರವಾನೆ
ಸಾವಿನ ಸಂಖ್ಯೆ 164ಕ್ಕೇರಿಕೆ: ಇಂದು (ಬುಧವಾರ) ಬೆಳಗ್ಗಿನ ವೇಳೆಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 164ಕ್ಕೆ ತಲುಪಿತು. ಮೃತರಲ್ಲಿ 75 ಮಂದಿಯನ್ನು ಗುರುತಿಸಲಾಗಿದೆ. 123 ಮಂದಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಇದುವರೆಗೆ ದೊರೆತ ಎಲ್ಲ ಮೃತದೇಹಗಳನ್ನು ಮೆಪ್ಪಾಡಿ ಕುಟುಂಬ ಆರೋಗ್ಯ ಕೇಂದ್ರ ಮತ್ತು ನಿಲಂಬೂರು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಭೂಕುಸಿದ ಪ್ರದೇಶದಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ಎನ್ಡಿಆರ್ಎಫ್ ಒಳಗೊಂಡಿರುವ ರಕ್ಷಣಾ ತಂಡಗಳು ಸತತವಾಗಿ ಪರಿಹಾರ ಹಾಗು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಸೇನಾ ತುಕಡಿಗಳು ಮಂಗಳವಾರ ರಾತ್ರಿಯವರೆಗೆ ಸುಮಾರು 1,000 ಜನರನ್ನು ರಕ್ಷಿಸಿವೆ.
ಅವಶೇಷಗಳಡಿ ಬದುಕುಳಿದವರಿಗೆ ಹುಡುಕಾಟ: ಭೂಕುಸಿತದ ಅವಶೇಷಗಳಡಿ ಜನರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜಲಪ್ರಳಯದಿಂದ ನಾಶವಾದ ಅಥವಾ ಮಣ್ಣಿನಿಂದ ಮುಚ್ಚಿಹೋಗಿರುವ ಮನೆಗಳ ಅವಶೇಷಗಳನ್ನು ಬಗೆದು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಬುಧವಾರ ಬೆಳಗ್ಗೆ ಮುಂಡಕ್ಕೈ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಿತು. ಧ್ವಂಸಗೊಂಡ ಮನೆಗಳಲ್ಲಿ ಮೃತದೇಹಗಳು ಕುಳಿತಿರುವ ಮತ್ತು ಮಲಗಿರುವ ಭಂಗಿಗಳ ಭಯಾನಕ ಸ್ಥಿತಿಯಲ್ಲಿ ಪತ್ತೆಯಾಗಿವೆ.
ದಾಖಲೆಗಳ ಮೂಲಕ ಗುರುತ ಪತ್ತೆ ಕಾರ್ಯ: ಮತ್ತೊಂದೆಡೆ, ವಯನಾಡ್ ಜಿಲ್ಲೆಯ ಅಧಿಕಾರಿಗಳು ಭೂಕುಸಿತದಲ್ಲಿ ಕಾಣೆಯಾದವರ ಮಾಹಿತಿ ಕಲೆ ಹಾಕಲು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ವಿಶೇಷ ತಂಡವು ಈ ಪ್ರದೇಶದಲ್ಲಿ ವಾಸಿಸುವವರ ಸಂಖ್ಯೆ, ಭೂಕುಸಿತದ ನಂತರ ಪತ್ತೆಯಾದವರು ಮತ್ತು ಕಾಣೆಯಾದವರ ಸಂಖ್ಯೆಯ ಮಾಹಿತಿ ಸಂಗ್ರಹಿಸುತ್ತಿದೆ. ಪಡಿತರ ಚೀಟಿ ವಿವರ ಮತ್ತು ಇತರ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಜನರ ಅಂಕಿಅಂಶಗಳನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ವಯನಾಡ್ ಭೂಕುಸಿತ: ಮೃತರ ಸಂಖ್ಯೆ 143ಕ್ಕೇರಿಕೆ, ತಾತ್ಕಾಲಿಕ ಸೇತುವೆ ಕಟ್ಟಿ 1 ಸಾವಿರ ಜನರ ರಕ್ಷಿಸಿದ ಸೇನೆ