ಅಯೋಧ್ಯೆ(ಉತ್ತರ ಪ್ರದೇಶ): ಕೇಂದ್ರ ಸರ್ಕಾರ 1954ರ ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಬಗ್ಗೆ ಮುಂದಿನ ವಾರ ಸಂಸತ್ತಿನಲ್ಲಿ ವಿಧೇಯಕ ಮಂಡನೆ ಮಾಡುವ ಸಾಧ್ಯತೆ ಇದೆ. ಸರ್ಕಾರದ ಈ ಕ್ರಮಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ವಿಶೇಷವೆಂದರೆ, ಅಯೋಧ್ಯೆ ಶ್ರೀರಾಮ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಹಾರಾಜ್ ಅವರು ಪ್ರಸ್ತಾವಿತ ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸಿದ್ದಾರೆ.
ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ, ಅದರ ನಿಯಂತ್ರಣ, ಇದನ್ನು ಹೈಕೋರ್ಟ್‌ಗಳು ಕೂಡ ಪ್ರಶ್ನಿಸುವಂತಿಲ್ಲ ಎಂಬ ಅಂಶಗಳಿಗೆ ತಿದ್ದುಪಡಿ ತರುವ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಮಂಡಳಿಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪ್ರಾತಿನಿಧ್ಯ ನೀಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಈ ತಿದ್ದುಪಡಿ ಮಸೂದೆ ಅಂಗೀಕಾರದ ಬಳಿಕ ವಕ್ಫ್ ಆಸ್ತಿಯನ್ನು ವಶಕ್ಕೆ ಪಡೆಯುವ ಮೊದಲು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಅನುಮತಿಯ ಮೇರೆಗೆ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂಬ ಪ್ರಮುಖ ಅಂಶವು ಪ್ರಸ್ತಾವಿತ ವಿಧೇಯಕದಲ್ಲಿದೆ. ಇದು ಮಂಡಳಿಯ ಪಾರದರ್ಶಕತೆ ಮತ್ತು ಆಸ್ತಿ ಮುಟ್ಟುಗೋಲಿನಲ್ಲಿ ಆಗುವ ಸಮಸ್ಯೆಯನ್ನೂ ಇದು ಬಗೆಹರಿಸಲಿದೆ ಎಂದು ಹೇಳಲಾಗಿದೆ.
ರಾಮನ ಅರ್ಚಕರು ಹೇಳಿದ್ದೇನು?: ವಕ್ಫ್ ಮಂಡಳಿ ಆಸ್ತಿ ಯಾವುದು?, ಯಾವ ಆಧಾರದ ಮೇಲೆ ಆಸ್ತಿ ಹೊಂದಿದೆ, ಆಸ್ತಿಯ ವಿತ್ತೀಯ ಮೌಲ್ಯ ಎಷ್ಟು? ಅದರ ಪರಿಶೀಲನೆ, ವಕ್ಫ್ ಅಧೀನದಲ್ಲಿರುವ ಭೂಮಿ, ವಿವಿಧ ಪ್ರದೇಶಗಳಲ್ಲಿನ ಬೋರ್ಡ್ಗಳ ಪರಿಶೀಲನೆ ನಡೆಯಬೇಕಿದೆ. ಆಸ್ತಿಯ ಮಾಲೀಕತ್ವದ ಆಧಾರ, ಭೂಮಿಯ ಮೂಲ ಮತ್ತು ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಪ್ರತಿಯೊಂದು ಅಂಶವು ಪರಿಶೀಲನೆ ಒಳಪಡಬೇಕು ಎಂದು ಅಯೋಧ್ಯೆ ಶ್ರೀರಾಮ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಹಾರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಎಸ್ಪಿ ವಿರೋಧ: ವಕ್ಫ್ ಮಂಡಳಿ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಸಮಾಜವಾದಿ ಪಕ್ಷ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಕ್ರಮವನ್ನು ವಿರೋಧಿಸಿ, ಬಿಜೆಪಿ ಕೇವಲ ಮುಸ್ಲಿಮರ ಹಕ್ಕುಗಳನ್ನು ಮಾತ್ರ ಕಸಿಯಲು ಬಯಸಿದೆ ಎಂದು ಆರೋಪಿಸಿ, ಬಿಜೆಪಿಗೆ ಹಿಂದೂ-ಮುಸ್ಲಿಂ ಹೊರತುಪಡಿಸಿ ಯಾವುದೇ ವಿಷಯವಿಲ್ಲ ಎಂದು ಜರಿದಿದ್ದಾರೆ.
ರಾಜ್ಯಸಭೆಯಲ್ಲಿ ಮೊದಲು ಮಂಡನೆ: ವಕ್ಫ್ ಮಂಡಳಿಯ ಅಧಿಕಾರ ನಿರ್ಬಂಧಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆಯಲ್ಲಿ ಮೊದಲು ಮಂಡಿಸುವ ಸಾಧ್ಯತೆಯಿದೆ. ಈ ವಾರದೊಳಗೆ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಬಜೆಟ್ ಅಧಿವೇಶನವು ಆಗಸ್ಟ್ 12ರಂದು ಮುಕ್ತಾಯಗೊಳ್ಳಲಿದೆ. ವಕ್ಫ್ ಕಾಯ್ದೆಯಲ್ಲಿ ಸುಧಾರಣೆ ತರಲು ಸರ್ಕಾರ ವಿವಿಧ ಮುಸ್ಲಿಂ ನಾಯಕರು ಮತ್ತು ಸಂಘಟನೆಗಳಿಂದ ಸಂವಾದ ನಡೆಸಿ ಸಲಹೆಗಳನ್ನು ಪಡೆದುಕೊಂಡಿದೆ. ಮಾಹಿತಿಯ ಪ್ರಕಾರ, ವಿಧೇಯಕದಲ್ಲಿ 32-40 ತಿದ್ದುಪಡಿಗಳನ್ನು ಮಾಡಲಾಗುತ್ತಿದೆ.
ವಕ್ಫ್ ಕಾಯ್ದೆಯನ್ನು 1954ರಲ್ಲಿ ಸಂಸತ್ತು ಅಂಗೀಕರಿಸಿತು. ತರುವಾಯ, ಅದನ್ನು ರದ್ದುಗೊಳಿಸಿ, ಮತ್ತೆ 1995 ರಲ್ಲಿ ಹೊಸ ವಕ್ಫ್ ಕಾಯಿದೆಯನ್ನು ಅಂಗೀಕರಿಸಲಾಯಿತು. 2013ರಲ್ಲಿ ಆಸ್ತಿಯನ್ನು 'ವಕ್ಫ್ ಆಸ್ತಿ' ಎಂದು ಗುರುತಿಸಲು ವಕ್ಫ್ ಮಂಡಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಯಿತು.
ಇದನ್ನೂ ಓದಿ: ವಕ್ಫ್ ಅಧಿಕಾರಕ್ಕೆ ಕಡಿವಾಣ ಹಾಕಲು ಮಸೂದೆ ತರಲು ಸರ್ಕಾರ ಸಜ್ಜು; ಹಿಂದುತ್ವ ಅಜೆಂಡಾದ ಭಾಗವಾಗಲಿ ಎಂದು ಓವೈಸಿ ಗರಂ - Waqf Board