ಅಲಿಗಢ (ಉತ್ತರಪ್ರದೇಶ): ಉತ್ತಮ ಬೋಧನೆ ಮಾಡಿ ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಿಕ್ಷಕಿಯೊಬ್ಬರು, ಶಾಲಾ ತರಗತಿಯಲ್ಲಿಯೇ ನಿದ್ದೆ ಮಾಡಿದ್ದಾರೆ. ಅಷ್ಟೇ ಅಲ್ಲ, ಫ್ಯಾನ್ ಇಲ್ಲ ಎಂಬ ಕಾರಣಕ್ಕಾಗಿ ಮಕ್ಕಳನ್ನು ಬೀಸಣಿಕೆಯಿಂದ ಗಾಳಿ ಹಾಕುವಂತೆ ಸೂಚಿಸಿದ್ದಾರೆ. ಈ 'ಮಹಾ ಶಿಕ್ಷಕಿ' ಪವಡಿಸುತ್ತಿದ್ದರೆ, ಮುಗ್ಧ ಮಕ್ಕಳು ಚಾಮರ ಬೀಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಸರ್ಕಾರ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋ ಹಳೆಯದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ತನಿಖೆ ನಡೆದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಡೆದಿದ್ದೇನು?: ವೈರಲ್ ಆದ ವಿಡಿಯೋ ಅಲಿಗಢ ಜಿಲ್ಲೆಯ ಧನಿಪುರ ಬ್ಲಾಕ್‌ನ ಗೋಕುಲ್ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆಯಿಂದ ಹೊರಬಿದ್ದಿದೆ. ಮಹಿಳಾ ಶಿಕ್ಷಕಿಯೊಬ್ಬರು ತರಗತಿಯಲ್ಲಿ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಿದ್ದಾರೆ. ಶಾಲಾ ಉಡುಗೆಯಲ್ಲಿರುವ ಇಬ್ಬರು ಬಾಲಕಿಯರು ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕುತ್ತಿದ್ದಾರೆ. ಇದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಶಾಲಾ ಅವಧಿಯಲ್ಲಿ ಪಾಠ ಬೋಧನೆ ಬಿಟ್ಟು ಮಕ್ಕಳನ್ನು ಸೇವಕರಂತೆ ನಡೆಸಿಕೊಂಡಿದ್ದಾರೆ.
ಶಿಕ್ಷಕಿಯ ಘನಂದಾರಿ ಕೆಲಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಇದು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರವೇ ತನಿಖೆ ನಡೆಸಲಾಗುವುದು. ಶಾಲೆಗೆ ತಂಡವೊಂದನ್ನು ಕಳುಹಿಸಿ ಸತ್ಯಾಸತ್ಯತೆ ತಿಳಿಯಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಾಂಜಾ ಹೊಡಿಸಿ ಯುವತಿ ರೇಪ್ ಮಾಡಿದ ಪತಿ, ವಿಡಿಯೋ ಮಾಡಿದ ಪತ್ನಿ! - law student raped in Tirupati