ಹೈದರಾಬಾದ್: ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ. ಅಮೆರಿಕ ಸರ್ಕಾರವು ವಿದ್ಯಾರ್ಥಿ ವೀಸಾ ಸಂದರ್ಶನದ ದಿನಾಂಕಗಳನ್ನು ಮಂಗಳವಾರ ಪ್ರಕಟಿಸಿದೆ. ಮೇ ತಿಂಗಳ 31ರವರೆಗೆ ಇದರ ಸ್ಲಾಟ್‌ಗಳ ಬಿಡುಗಡೆ ಮಾಡಲಾಗಿದೆ.
ಅಮೆರಿಕಾದಲ್ಲಿ ಪ್ರತಿ ವರ್ಷ ಆಗಸ್ಟ್- ಸೆಪ್ಟೆಂಬರ್ನಲ್ಲಿ ಸೆಮಿಸ್ಟರ್ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತದೆ. ವಿವಿಧ ಭಾಗದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ ಅಮೆರಿಕಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಅಮೆರಿಕ ವಿದ್ಯಾರ್ಥಿ ವೀಸಾ ಒದಗಿಸುತ್ತದೆ. 2024ನೇ ಶೈಕ್ಷಣಿಕ ವರ್ಷಕ್ಕೆ ಮೊದಲ ಹಂತದಲ್ಲಿ ಮೇ ತಿಂಗಳ ಸಂದರ್ಶನದ ದಿನಾಂಕ ಬಿಡುಗಡೆ ಮಾಡಲಾಗಿದೆ.
ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮತ್ತು ಹೈದರಾಬಾದ್, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದ ಕಾನ್ಸುಲೇಟ್ ಕಚೇರಿಗಳಲ್ಲಿ ಸಂದರ್ಶನಕ್ಕೆ ಹಾಜರಾಗಲು ವಿದ್ಯಾರ್ಥಿಗಳು ಸ್ಲಾಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಈ ತಿಂಗಳು 31ರವರೆಗೆ ಸ್ಲಾಟ್‌ಗಳು ಲಭ್ಯ ಇರುತ್ತದೆ. ಅಲ್ಲದೇ, ಈ ಬಾರಿ ದೊಡ್ಡ ಮಟ್ಟದಲ್ಲಿ ಸ್ಲಾಟ್‌ಗಳನ್ನು ಬಿಡುಗಡೆ ಮಾಡಲು ಅಮೆರಿಕ ಸರ್ಕಾರ ನಿರ್ಧರಿಸಿದೆ.
ಜೂನ್ ಸ್ಲಾಟ್‌ಗಳಿಗೆ ಸಂದರ್ಶನದ ದಿನಾಂಕಗಳನ್ನೂ ಇದೇ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಂತರ ಜುಲೈನಲ್ಲಿ ಮತ್ತು ಆಗಸ್ಟ್‌ನ ಅವಶ್ಯಕತೆಗೆ ಅನುಗುಣವಾಗಿ ದಿನಾಂಕ ಪ್ರಕಟಿಸಲಾಗಿದೆ. ಹಂತ ಹಂತವಾಗಿ ಸ್ಲಾಟ್‌ಗಳು ಲಭ್ಯವಾಗಲಿವೆ ಎಂದು ಅಮೆರಿಕದ ಕಾನ್ಸುಲೇಟ್ ಪ್ರತಿನಿಧಿಯೊಬ್ಬರು 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ಭಾನುವಾರವೂ ಬೆರಳಚ್ಚು ನೋಂದಣಿಗೆ ಅವಕಾಶ: ವೀಸಾ ಪ್ರಕ್ರಿಯೆಯ ಭಾಗವಾಗಿ ಅಮೆರಿಕವು ಫಿಂಗರ್‌ಪ್ರಿಂಟಿಂಗ್ (ಬೆರಳಚ್ಚು) ಪಡೆಯುತ್ತದೆ. ನಂತರ ಮುಖಾಮುಖಿ ಸಂದರ್ಶನ ಇರಲಿದೆ. ಶನಿವಾರ ಮತ್ತು ಭಾನುವಾರದಂದು ಅಮೆರಿಕದ ರಾಯಭಾರ ಕಚೇರಿ ಮತ್ತು ಎಲ್ಲ ಕಾನ್ಸುಲೇಟ್ ಕಚೇರಿಗಳಿಗೆ ರಜೆ ಇರುತ್ತದೆ. ಆದರೆ, ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳಿಂದಾಗಿ ಮೇ 19 ಮತ್ತು 26ರಂದು (ಭಾನುವಾರ) ಕೂಡ ಬೆರಳಚ್ಚು ನೋಂದಣಿಗೆ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ.
ಅಕ್ಟೋಬರ್‌ನಲ್ಲಿ ಪ್ರವಾಸಿ ವೀಸಾ?: ವಿದ್ಯಾರ್ಥಿ ವೀಸಾಗಳ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರವಾಸಿ ವೀಸಾ (B1, B2) ಸ್ಲಾಟ್‌ಗಳು ಲಭ್ಯಗಳು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳ ವೀಸಾ ಪ್ರಕ್ರಿಯೆಯು ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅದರ ನಂತರ, ಪ್ರವಾಸಿ ವೀಸಾ ಸ್ಲಾಟ್‌ಗಳನ್ನು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್‌ನಲ್ಲಿ ನೀಡಲಾಗುತ್ತದೆ. ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಪ್ರವಾಸಿ ವೀಸಾ ಪ್ರಕ್ರಿಯೆಯನ್ನು ಮೊದಲೇ ಪೂರ್ಣಗೊಳಿಸಲು ಅಮೆರಿಕ ಯೋಜಿಸಿದೆ.
ಇದನ್ನೂ ಓದಿ: ಇರಾನ್ಗೆ ಹೋಗಲು ಭಾರತೀಯರಿಗೆ ಇನ್ನು ಮುಂದೆ ವೀಸಾ ಬೇಕಿಲ್ಲ