ನವದೆಹಲಿ: ದೇಶದಲ್ಲಿ ಜಾರಿಯಾಗಿರುವ ಪೌರತ್ವ ನೀಡುವ ಸಿಎಎ ಕಾಯ್ದೆಗೆ ಕೆಲವೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದರೆ, ವಿದೇಶದಿಂದ ಶ್ಲಾಘನೆ ಹರಿದು ಬರುತ್ತಿದೆ. ಅಮೆರಿಕದ ಖ್ಯಾತ ನಟಿ, ಗಾಯಕಿ ಮೇರಿ ಮಿಲ್ಬೆನ್ ಸಿಎಎ ಕಾಯ್ದೆ ಜಾರಿಯು "ಪ್ರಜಾಪ್ರಭುತ್ವದ ನಿಜವಾದ ಕೆಲಸ ಮತ್ತು ಶಾಂತಿಯ ಮಾರ್ಗ" ಎಂದು ಬಣ್ಣಿಸಿದ್ದಾರೆ.
ಅಮೆರಿಕನ್ ನಟಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದು, ಸಹಾನುಭೂತಿ ಹೊಂದಿರುವ ನಿಜವಾದ ನಾಯಕ. ಭಾರತಕ್ಕೆ ಸಿಕ್ಕ ಅತ್ಯುತ್ತಮ ಧುರೀಣ. ಅಲ್ಪಸಂಖ್ಯಾತರು ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ "ಜಾಗತಿಕ ವಕೀಲ" ಎಂದು ಬಣ್ಣಿಸಿದ್ದಾರೆ.
ಬೇರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿರುವ ಜನರಿಗೆ ಪೌರತ್ವ ನೀಡುವ ಕಾಯ್ದೆ ಜಾರಿ ಮಾಡಿದ್ದು, ಸಹಾನುಭೂತಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮೋದಿ ಕಾಲಿಗೆ ಎರಗಿದ್ದ ಗಾಯಕಿ: 2022 ರಲ್ಲಿ ಭಾರತದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದ ಮೇರಿ ಮಿಲ್ಬೆನ್ ಅವರು ಆಹ್ವಾನಿತ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಅವರು ಕಾರ್ಯಕ್ರಮದಲ್ಲಿ ಗಾಯನ ಪ್ರದರ್ಶನ ನೀಡಿದ್ದರು.
ಇದಕ್ಕೂ ಮೊದಲು ಅಮೆರಿಕದಲ್ಲಿ 2020 ರಲ್ಲಿ ನಡೆದ ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆ, ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ 'ಓಂ ಜೈ ಜಗದೀಶ್ ಹರೇ' ಗೀತೆಯನ್ನು ಹಾಡಿ ಗಮನ ಸೆಳೆದಿದ್ದರು. ಬಳಿಕ ಅವರು ಪ್ರಧಾನಿ ಮೋದಿ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದರು. ಇದು ಭಾರೀ ವೈರಲ್ ಆಗಿತ್ತು. ಜೊತೆಗೆ ಮೇರಿ ಅವರು ಹಾಡಿದ ಗೀತೆಯನ್ನು ಪ್ರಪಂಚದಾದ್ಯಂತ ಕೋಟ್ಯಂತರ ಜನರು ವೀಕ್ಷಿಸಿ ಪ್ರಶಂಸಿಸಿದ್ದರು.
ಏನಿದು ಸಿಎಎ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರು, ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಭಾರತೀಯ ನಾಗರಿಕತ್ವವನ್ನು ನೀಡುವ ಮಹತ್ತರ ಕಾಯ್ದೆ ಇದಾಗಿದೆ. 2019 ರಲ್ಲಿ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಇದೀಗ ನಿಯಮಗಳನ್ನು ರೂಪಿಸಿ ದೇಶದಲ್ಲಿ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸಿಎಎ ಜಾರಿ ಬಗ್ಗೆ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಬಿಜೆಪಿಯ 2019 ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಸಿಎಎ ಜಾರಿ ಬಗ್ಗೆ ಆಶ್ವಾಸನೆ ನೀಡಲಾಗಿತ್ತು. 2024 ರ ಲೋಕಸಭೆ ಚುನಾವಣೆಗೂ ಮೊದಲು ಅದನ್ನು ಜಾರಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರ