ಮುಂಬೈ (ಮಹಾರಾಷ್ಟ್ರ): ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಪಂಚತಾರಾ ಹೋಟೆಲ್ ಕೊಠಡಿಯಲ್ಲಿ ಮಂಗಳವಾರ ಬೆಳಗ್ಗೆ 62 ವರ್ಷದ ಅಮೆರಿಕ ಪ್ರಜೆಯೊಬ್ಬರ ಶವವಾಗಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತ ವ್ಯಕ್ತಿಯನ್ನು ಮಾರ್ಕ್ ವಿಲಿಯಮ್ಸ್ ಎಂದು ಗುರುತಿಸಲಾಗಿದ್ದು, ಮಾರ್ಚ್ 9 ರಂದು ಮುಂಬೈಗೆ ಬಂದಿದ್ದರು. ಮಾರ್ಚ್ 14 ರಂದು ಅಮರಿಕಕ್ಕೆ ಹಿಂತಿರುಗಲು ಯೋಜಿಸಿದ್ದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಸಹಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಸೋನಾವಾನೆ ಅವರು, ''ಈ ಪ್ರಕರಣದಲ್ಲಿ ಸಹರ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದ ಸಾವಿನ ವರದಿ: "ಅಮೆರಿಕ ಪ್ರಜೆ ಸಭೆಯ ನಿಮಿತ್ತ ಮುಂಬೈನಲ್ಲಿ ತಂಗಿದ್ದರು. ಮಾರ್ಚ್ 9ರಿಂದ ಖಾಸಗಿ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಮುಂಬೈ ಶಹರ ಪೊಲೀಸರು ಅಪಘಾತದ ಸಾವಿನ ಬಗ್ಗೆ ಪ್ರಕರಣ (Accidental death report) ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
''ಘಟನೆಯಲ್ಲಿ ಯಾವುದೇ ದುಷ್ಕೃತ್ಯದ ಶಂಕೆ ಇಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ, ವಿದೇಶಿ ಪ್ರಜೆಯು ನೈಸರ್ಗಿಕ ಕಾರಣಗಳಿಂದ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರವಷ್ಟೇ ಅಮೆರಿಕದ ಹಿರಿಯ ನಾಗರಿಕ ವಿಲಿಯಂ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಮುಂದಿನ ಕ್ರಮ ಕೈಗೊಳ್ಳಲು ಸಹಾರ್ ಪೊಲೀಸರು ಯುಎಸ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅಮೆರಿಕದ ಪ್ರಜೆ ಹಾಗೂ ಈ ವ್ಯಕ್ತಿ ಮುಂಬೈಗೆ ಏಕೆ ಬಂದಿದ್ದಾರೆ. ಅವರೊಂದಿಗೆ ಅಮೆರಿಕದಿಂದ ಬೇರೆ ಯಾರಾದರೂ ಬಂದಿದ್ದಾರಾ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗುಜರಾತ್ ಕರಾವಳಿಯಲ್ಲಿ 480 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: ಪಾಕಿಸ್ತಾನದ ದೋಣಿ ವಶ, ಆರು ಜನರ ಸೆರೆ