ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷಾ ದಿನಾಂಕವನ್ನು ಮುಂದೂಡಿದೆ. ಈ ಮೊದಲು ಮೇ 26ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಇದೀಗ ಪರೀಕ್ಷೆಯನ್ನು ಜೂನ್ 16ಕ್ಕೆ ಮುಂದೂಡಲಾಗಿದೆ.
ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದೂಡುವ ಮಹತ್ವದ ನಿರ್ಧಾರವನ್ನು ಆಯೋಗ ಕೈಗೊಂಡಿದೆ.
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆಗಳಿಗೆ (ಐಪಿಎಸ್) ಅಧಿಕಾರಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕಸೇವಾ ಆಯೋಗ ಫೆ.14ರಂದು ಪ್ರಿಲಿಮ್ಸ್ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿತ್ತು. ಅಧಿಸೂಚನೆಯ ಪ್ರಕಾರ, ಈ ವರ್ಷ ಸುಮಾರು 1,056 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ನಾಗರಿಕ ಸೇವೆಗಳ ಪರೀಕ್ಷೆಯು ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂಬ ಮೂರು ಹಂತಗಳಲ್ಲಿ ನಡೆಯುತ್ತದೆ.
ಮಣಿಪುರದಿಂದ ಪರೀಕ್ಷೆ ಸ್ಥಳಾಂತರ ಕೋರಿ ಅರ್ಜಿ: ಈ ವರ್ಷ ಮಣಿಪುರದಲ್ಲಿ ನಾಗರಿಕ ಸೇವೆಗಳ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಮಣಿಪುರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಹಿಂಸಾಚಾರಪೀಡಿತ ಮಣಿಪುರದ ಹೊರಗೆ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಅಲ್ಲದೇ ಸರ್ಕಾರವು ಅಭ್ಯರ್ಥಿಗಳಿಗೆ ರಾಜ್ಯದ ಹೊರಗಿನ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯ ಹಂತದಲ್ಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಚುನಾವಣಾ ಸಮಿತಿಯ ಸರಣಿ ಸಭೆ; ಇಂದು ಕರ್ನಾಟಕದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್?