ಬಸ್ತಿ (ಉತ್ತರ ಪ್ರದೇಶ): ಮೂಢನಂಬಿಕೆಯಿಂದಾಗಿ ಉತ್ತರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿನ ಬಸ್ತಿ ಜಿಲ್ಲೆಯಲ್ಲಿ ಗುರುವಾರ ಮಹಿಳೆಯೊಬ್ಬರು 'ಅತೀಂದ್ರಿಯ ಆಚರಣೆ' ಭಾಗವಾಗಿ ತನ್ನ ಪುಟ್ಟ ಮಗಳ ಕತ್ತನ್ನು ಹರಿತವಾದ ವಸ್ತುವಿನಿಂದ ಸೀಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತಾಯಿ ಗೀತಾ (33) ಎಂಬುವವರು ತನ್ನ ಎರಡು ತಿಂಗಳ ಮಗಳ ಮೇಲೆ ಹರಿತವಾದ ವಸ್ತುವಿನಿಂದ ಹಲ್ಲೆ ಮಾಡಿದ್ದಾರೆ. ತಾಯಿಯ ಈ ಕೃತ್ಯದಿಂದಾಗಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಈ ನಡುವೆ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಆಕೆಯ ಪತಿ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಗಂಭೀರವಾಗಿ ಗಾಯಗೊಂಡ ಮಗುವನ್ನು ಆಕೆಯ ಕುಟುಂಬ ಸದಸ್ಯರು ಆಸ್ಪತ್ರೆಗೆ ಸಾಗಿಸಿದ್ದು, ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆ ಮಾನಸಿಕವಾಗಿ ಕುಗ್ಗಿದ್ದು, ಅತೀಂದ್ರಿಯ ಅಭ್ಯಾಸದಲ್ಲಿ ನಂಬಿಕೆ ಹೊಂದಿದ್ದಾಳೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಕುಟುಂಬದವರು ನೀಡಿದ ದೂರಿನ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮೂಢನಂಬಿಕೆಯ "ನಿಗೂಢ ಆಚರಣೆಗಳ" ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ಆಗಾಗ್ಗೆ ಇಂತಹ ವರದಿಗಳು ಆಗುತ್ತಲೇ ಇವೆ. ಮಕ್ಕಳ ಮೇಲೆ ಆಗಾಗ್ಗೆ ಇಂತಹ ದುರುಳ ಆಚರಣೆಗಳನ್ನು ಪ್ರಯೋಗ ಮಾಡಲಾಗುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ.
ಇದನ್ನು ಓದಿ:ಬ್ಲ್ಯಾಕ್ ಮ್ಯಾಜಿಕ್ ಮಾಡುತ್ತೇನೆ ಎಂದು ಲಕ್ಷ ಲಕ್ಷ ಪೀಕಿದ ಸೈಬರ್ ಬಾಬಾ!