ಆಗ್ರಾ(ಉತ್ತರ ಪ್ರದೇಶ): ತಾಜ್ ನಗರಿಯಲ್ಲಿ ದಿನೇ ದಿನೇ ಮಂಗಗಳ ಉಪದ್ರವ ಹೆಚ್ಚಾಗುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹಾಗು ಸ್ಥಳೀಯರ ಮೇಲೆ ನಿತ್ಯ ಒಂದಿಲ್ಲೊಂದು ಕಡೆ ದಾಳಿ ನಡೆಯತ್ತಲೇ ಇವೆ. ಅದರಲ್ಲೂ ತಾಜ್ ಮಹಲ್, ಆಗ್ರಾ ಕೋಟೆ, ರೈಲ್ವೆ ನಿಲ್ದಾಣದಲ್ಲಿ ಮಂಗಗಳ ದಾಳಿ ವರದಿಗಳಾಗುತ್ತಿವೆ. ಇದನ್ನು ಗಮನಿಸಿರುವ ಮುನ್ಸಿಪಲ್ ಕಾರ್ಪೊರೇಷನ್ ದೇಶದಲ್ಲೇ ಮೊದಲ ಮಂಗಗಳ ರಕ್ಷಣೆ ಮತ್ತು ಆರೈಕೆ ಕೇಂದ್ರ ನಿರ್ಮಾಣ ಕಾರ್ಯಕ್ಕೆ ಸಜ್ಜಾಗಿದೆ. ಇದಕ್ಕಾಗಿ ಆಗ್ರಾದ ಸಿಕಂದರಾ ಎಂಬ ಪ್ರದೇಶದಲ್ಲಿ 5 ಎಕರೆ ಜಾಗ ಗುರುತಿಸಲಾಗಿದ್ದು, ಒಟ್ಟು 14 ರೂ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ತಾಜ್ ಮಹಲ್, ತಾಜ್‌ಗಂಜ್ ಪ್ರದೇಶ, ಏಕಲವ್ಯ ಸ್ಟೇಡಿಯಂ, ಮಧು ನಗರ, ರಾಜಮಂಡಿ ಪ್ರದೇಶ, ಎಸ್‌ಎನ್ ಮೆಡಿಕಲ್ ಕಾಲೊನಿ, ಮಂಟೋಲಾ, ಪವರ್ ಹೌಸ್, ಸಿಕಂದರಾ ಸ್ಮಾರಕ, ರಾಂಬಾಗ್, ನುನಿಹೈ, ಬೆಲಂಗಂಜ್, ಕಲೆಕ್ಟರೇಟ್, ಪೊಲೀಸ್ ಲೈನ್ ಸೇರಿದಂತೆ ನಗರದ ಪ್ರಮುಖ ಪ್ರದೇಶದಲ್ಲಿ ಮಂಗಗಳ ಉಪಟಳ ಜಾಸ್ತಿ. ಮಹಾನಗರ ಪಾಲಿಕೆಯ ಪ್ರಕಾರ, ನಗರದಲ್ಲಿ ಸುಮಾರು 90 ಸಾವಿರ ಮಂಗಗಳಿದ್ದು ದಿನವೂ ದಾಳಿ ನಡೆಯುತ್ತಲೇ ಇವೆ. ಇವುಗಳ ದಾಳಿಗೊಳಗಾಗಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಆಗಮಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ.
ಆಗ್ರಾದ ಹಳೆಯ ನಗರ ಬೆಳಂಗಂಜ್, ಭೈನ್ರೋ ಬಜಾರ್, ಮೈಥಾನ್, ರಾವತ್‌ಪಾದ, ದರೇಸಿ, ಛಟ್ಟಾ, ಮೋತಿಗಂಜ್, ಆಸ್ಪತ್ರೆ ರಸ್ತೆ, ಮೋತಿ ಕತ್ರಾ, ನೂರಿ ಗೇಟ್, ಕಿನಾರಿ ಬಜಾರ್, ಘಾಟಿಯಾ ಅಜಮ್ ಖಾನ್, ಯಮುನಾ ಕಿನಾರಾ ರಸ್ತೆ, ಜೀವನಿ ಮಂಡಿ, ಲಾಂಗ್ಡೆ ಕಿ ಚೌಕಿ, ಎಸ್‌ಎನ್ ಮೆಡಿಕಲ್ ಕಾಲೇಜು, ರಾಜಾ ಕಿ ಮಂಡಿ, ಲೋಹಮಂಡಿ, ಶಹಗಂಜ್, ಮಂಟೋಲಾ, ಪವರ್ ಹೌಸ್ ಪ್ರದೇಶದ ಜನರು ಕೋತಿಗಳ ಭೀತಿಯಿಂದ ತಮ್ಮ ಮನೆಗಳ ವರಾಂಡಾಗಳು, ಛಾವಣಿಗಳು ಮತ್ತು ಬಾಲ್ಕನಿಗಳನ್ನು ಕಬ್ಬಿಣದ ಬಲೆಗಳಿಂದ ಮುಚ್ಚಿದ್ದಾರೆ.
ಒಂದು ವೇಳೆ ಮನೆಯ ಗೇಟು ಅಥವಾ ಬಾಗಿಲು ತೆರೆದಿರುವುದು ಕಂಡುಬಂದರೆ ಒಟ್ಟಿಗೆ 10ರಿಂದ 20ಕ್ಕೂ ಹೆಚ್ಚಿನ ಮಂಗಗಳು ಮನೆಗಳಿಗೆ ನುಗ್ಗಿ ದಾಳಿ ಮಾಡುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.
ಮಂಗಗಳ ರಕ್ಷಣ ಕೇಂದ್ರದಲ್ಲಿ ಎರಡು ಸಾವಿರ ಕೋತಿಗಳನ್ನು ಆರೈಕೆ ಮಾಡಬಹುದು. ಆರಂಭದಲ್ಲಿ 500 ಮಂಗಗಳ ಆರೈಕೆ ನಡೆಯುತ್ತದೆ. ಕೇವಲ ಅನಾರೋಗ್ಯ ಮತ್ತು ವಯಸ್ಸಾದ ಮಂಗಗಳನ್ನು ಮಾತ್ರ ಈ ಕೇಂದ್ರದಲ್ಲಿ ಸಾಕಲಾಗುತ್ತದೆ. ಆರೋಗ್ಯವಂತ ಕೋತಿಗಳನ್ನು ಕಾಡಿನಲ್ಲಿ ಬಿಡಲಾಗುವುದು ಎಂದು ಪಾಲಿಕೆ ಮಾಹಿತಿ ನೀಡಿದೆ.
ಆಗ್ರಾ ಮಹಾನಗರ ಪಾಲಿಕೆಯ ಪ್ರಾಣಿ ಕಲ್ಯಾಣ ಅಧಿಕಾರಿ ಡಾ.ಅಜಯ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, "ಮಂಗಗಳ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸಲಾಗಿದೆ. ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಿಸಲಾಗುತ್ತದೆ. ಇದರಿಂದ ನಗರದ ಜನತೆಗೆ ಮಂಗಗಳ ಕಾಟದಿಂದ ಮುಕ್ತಿ ದೊರೆಯಲಿದೆ. ಪಾಲಿಕೆ ಈಗಾಗಲೇ ನಗರದಲ್ಲಿ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ 10 ಸಾವಿರ ಮಂಗಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಶಿವಮೊಗ್ಗ: ವಿಠಲಗೊಂಡನಕೊಪ್ಪ ಗ್ರಾಮದಲ್ಲಿ ಮುಸಿಯನ ಕಾಟ; ಬೇಸತ್ತ ಗ್ರಾಮಸ್ಥರು