ಲಖನೌ: ಕೃತಕ ತಂತ್ರಜ್ಞಾನ (ಎಐ)ವನ್ನು ನಕರಾತ್ಮಕವಾಗಿ ಬಳಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಧುಮೇಹ ಔಷಧಿಯನ್ನು ಪ್ರಚಾರ ಮಾಡುತ್ತಿರುವ ರೀತಿ ಬಿಂಬಿಸಲಾದ ನಕಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಗ್ರೇಸ್ ಗಾರ್ಸಿಯಾ ಎಂಬ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. 41 ಸೆಕೆಂಡುಗಳ ವಿಡಿಯೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮಧುಮೇಹದ ಔಷಧಿಯೊಂದನ್ನು ಖರೀದಿಸಲು ಹೇಳುತ್ತಿರುವುದು ಇದರಲ್ಲಿದೆ. ಈ ನಕಲಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋವು ಗ್ರೇಸ್ ಗಾರ್ಸಿಯಾ ಎಂಬ ಫೇಸ್ಬುಕ್ ಪೇಜ್ನಲ್ಲಿ ಮೊದಲು ಕಾಣಿಸಿಕೊಂಡಿದೆ. ಇದರ ವಿರುದ್ಧ ಇನ್ಸ್‌ಪೆಕ್ಟರ್ ಮೊಹಮ್ಮದ್ ಮುಸ್ಲಿಂ ಖಾನ್ ಅವರು ನೀಡಿದ ದೂರಿನ ಮೇರೆಗೆ ಹಜರತ್‌ಗಂಜ್‌ನ ಸೈಬರ್ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗದಲ್ಲಿ, ಐಪಿಸಿ ಸೆಕ್ಷನ್ 419 (ಮೋಸ), 420 (ವಂಚನೆ), 511 (ಅಪರಾಧಕ್ಕೆ ಪ್ರಯತ್ನ) ಮತ್ತು 2008 ರ ಐಟಿ ಕಾಯಿದೆಯಡಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಚಿಕ್ಕ ವಿಡಿಯೋವನ್ನು ಫೆಬ್ರವರಿ 26 ರಂದು ಗ್ರೇಸ್ ಗಾರ್ಸಿಯಾ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದು 225 ಸಾವಿರ ವೀಕ್ಷಣೆ ಕಂಡಿದೆ. 120 ಸಲ ಶೇರ್ ಮಾಡಲಾಗಿದೆ. ಥಂಬ್ನೇಲ್ನಲ್ಲಿ ಭಾರತದಲ್ಲಿ "ಮಧುಮೇಹ ರೋಗವನ್ನು ಓಡಿಸಲಾಗಿದೆ. ಮಧುಮೇಹಕ್ಕೆ ಇನ್ನು ವಿದಾಯ ಹೇಳಿ" ಎಂದು ಬರೆಯಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ತುಣುಕನ್ನು ಕದ್ದು, ಅದಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಧ್ವನಿ ಸೇರಿಸಲಾಗಿದೆ. ಖಾಸಗಿ ವೆಬ್‌ಸೈಟ್ ಮೂಲಕ ಮಧುಮೇಹಕ್ಕೆ ಔಷಧವನ್ನು ಖರೀದಿಸುವುದನ್ನು ಉತ್ತೇಜಿಸಲು ಮುಖ್ಯಮಂತ್ರಿಗಳ ಆಡಿಯೊ ಮತ್ತು ಧ್ವನಿ ನಿರೂಪಣೆ ಇದರಲ್ಲಿದೆ.
"ಈ ಔಷಧಿಯನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಔಷಧಿಯನ್ನು ಖರೀದಿಸಿ. ರೋಗ ಮುಕ್ತರಾಗಿ ಎಂದು ಮುಖ್ಯಮಂತ್ರಿ ಹೇಳುತ್ತಿರುವುದು ವಿಡಿಯೋದಲ್ಲಿದೆ ಎಂದು ದೂರು ನೀಡಿದ ಇನ್ಸ್‌ಪೆಕ್ಟರ್ ಪೋಸ್ಟ್ನ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
ಇದಕ್ಕೂ ಮೊದಲು ಕ್ರಿಕೆಟರ್ಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ, ರಶ್ಮಿಕಾ ಮಂದಣ್ಣ ಅವರ ಡೀಪ್ಫೇಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗಿತ್ತು. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪುತ್ರಿ ಸಾರಾ ಬಳಿಕ ಸಚಿನ್ ತೆಂಡೂಲ್ಕರ್ಗೆ ಡೀಪ್ಫೇಕ್ ತಲೆಬಿಸಿ: ನಕಲಿ ವಿಡಿಯೋ ವಿರುದ್ಧ ಆಕ್ರೋಶ