ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿ ನೀಡಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಸೆಪ್ಟೆಂಬರ್ 30 ರೊಳಗೆ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿ ವಿಪಕ್ಷಗಳ I.N.D.I.A ಕೂಟ ಜಮ್ಮುವಿನಲ್ಲಿ ಇಂದು (ಆಗಸ್ಟ್ 3) ಪ್ರತಿಭಟನೆ ನಡೆಸಿದವು.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ (ಎಂ) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತು ಜಮ್ಮು ಮೂಲದ 12 ಪ್ರತಿಪಕ್ಷಗಳ ರಾಜಕೀಯ ಮತ್ತು ಸಾಮಾಜಿಕ ಪಕ್ಷಗಳ ಒಕ್ಕೂಟವಾದ ಆಲ್ ಪಾರ್ಟಿ ಯುನೈಟೆಡ್ ಫ್ರಂಟ್ (ಎಪಿಯುಎಫ್) ನ ಹಿರಿಯ ನಾಯಕರು, ಕಾರ್ಯಕರ್ತರು ನಗರದಲ್ಲಿರುವ ಮಹಾರಾಜ ಹರಿ ಸಿಂಗ್ ಪ್ರತಿಮೆಯ ಮುಂಭಾಗ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿದ್ದನ್ನು ಖಂಡಿಸಿದವು.
ಸುಪ್ರೀಂಕೋರ್ಟ್ ಅಂತಿಮ ಗಡುವು: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಸೆಪ್ಟೆಂಬರ್ 30 ರೊಳಗೆ ರಾಜ್ಯ ಸ್ಥಾನಮಾನವನ್ನು ನೀಡಿ, ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ಗೆ ಅಂತಿಮ ಗಡುವು ನೀಡಿದೆ. ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಇದೀಗ ಲೋಕಸಭೆ ಚುನಾವಣೆ ಮುಗಿದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲೇಬೇಕಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಐತಿಹಾಸಿಕ ಹಿನ್ನೆಲೆಯುಳ್ಳ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ, ಇಲ್ಲಿನ ಜನರ ಸ್ಥಾನಮಾನ, ಘನತೆ, ಗುರುತು ಮತ್ತು ಹಕ್ಕುಗಳನ್ನು ಕಿತ್ತುಕೊಂಡಿದೆ. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸ್ಥಾನಮಾನದ ಬಗ್ಗೆ ಭರವಸೆ ನೀಡಿದೆ. ಕಳೆದ 6 ವರ್ಷಗಳಲ್ಲಿ ಅದು ಜಾರಿಗೆ ಬಂದಿಲ್ಲ. ಸುಪ್ರೀಂಕೋರ್ಟ್ ವಿಧಾನಸಭೆ ಚುನಾವಣೆಯ ಅಂತಿಮ ಗಡುವು ನೀಡಿದ್ದರ ನಡುವೆ, ಇಲ್ಲಿನ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಉಗ್ರ ದಾಳಿ ತಡೆಯಲು ವಿಫಲ: ಪ್ರತಿಭಟನಾನಿರತ ಪ್ರತಿಪಕ್ಷಗಳ ನಾಯಕರು ರಾಜ್ಯ ಸ್ಥಾನಮಾನ, ಭೂಮಿ ಮತ್ತು ಉದ್ಯೋಗ ಹಕ್ಕುಗಳ ಮರುಸ್ಥಾಪನೆ ಮತ್ತು ವಿಧಾನಸಭಾ ಚುನಾವಣೆಯನ್ನು ಬೆಂಬಲಿಸುವ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಇಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರ ದಾಳಿಗಳು ವಿಪರೀತವಾಗಿವೆ. ಶಾಂತಿಯುತ ಜಮ್ಮು ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿಪಕ್ಷಗಳು ಆರೋಪಿಸಿದವು.
ಸಮಿತಿ ರಚನೆ: ರಾಜ್ಯತ್ವವನ್ನು ಮರುಸ್ಥಾಪಿಸುವ ಹೋರಾಟವನ್ನು ಮುಂದುವರಿಸಲು ಎಪಿಯುಎಫ್ 11 ಸದಸ್ಯರ ಕೋರ್ ಕಮಿಟಿಯನ್ನು ರಚಿಸಿತು. ಮಾಜಿ ಸಂಸದ ಶೇಖ್ ಅಬ್ದುಲ್ ರೆಹಮಾನ್ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಶಿವಸೇನೆ (ಯುಬಿಟಿ), ಎಎಪಿ ಮತ್ತು ಸಿಪಿಐ(ಎಂ) ಇತರ ಸದಸ್ಯರನ್ನು ಒಳಗೊಂಡಿದೆ.
2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ರದ್ದು ಮಾಡಿತು. ಬಳಿಕ ಲಡಾಖ್ ಮತ್ತು ಜಮ್ಮು ಕಾಶ್ಮೀರ ಎಂದು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಇಬ್ಭಾಗ ಮಾಡಿತು. ಈಚೆಗೆ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಗೆ, 2019 ರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಗೃಹ ಸಚಿವಾಲಯವು ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ.