ಡೆಹ್ರಾಡೂನ್, ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆಯ ನಿಯಮಗಳ ಕುರಿತ ರಚನೆ ಮಾಡಿರುವ ಸಮಿತಿಯು ಅಂತಿಮ ಮುದ್ರೆ ಒತ್ತಿದ್ದು, ಉತ್ತರಾಖಂಡದಲ್ಲಿ ಯುಸಿಸಿ ಅನುಷ್ಠಾನಕ್ಕೆ ಮಾರ್ಗವನ್ನು ಸುಗಮಗೊಳಿಸಿದೆ.
ಈ ಬಗ್ಗೆ ಮಾತನಾಡಿರುವ ಉತ್ತರಾಖಂಡ ಯೂನಿಫಾರ್ಮ್ ಸಿವಿಲ್ ಕೋಡ್ ನಿಯಮಗಳ ಸಮಿತಿ ಅಧ್ಯಕ್ಷ ಶತ್ರುಘ್ನ ಸಿಂಗ್, ಯುಸಿಸಿ ನಿಯಮಗಳಿಗೆ ಅಂತಿಮ ಮುದ್ರೆ ಹಾಕಲಾಗಿದೆ ಮತ್ತು ಮುಂದಿನ ವಾರ ಅಥವಾ ಹತ್ತು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯು ಈಗಾಗಲೇ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಅಂಗೀಕರಿಸಿತ್ತು. ಆ ಬಳಿಕ ನಿಯಮಗಳ ರಚನೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯ ಮೊದಲ ಸಭೆ ಫೆಬ್ರವರಿ ಕೊನೆಯ ವಾರದಲ್ಲಿ ನಡೆದಿದ್ದು, ಇದೀಗ ಅಂತಿಮ ಸಭೆ ನಡೆಸಿ, ಏಕರೂಪ ನಾಗರಿಕ ಸಂಹಿತೆಯ ನಿಯಮಗಳಿಗೆ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಯುಸಿಸಿ ಕೋಡ್ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಇದನ್ನು ಓದಿ:'ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನೇ ನುಂಗುವ ಪರಾವಲಂಬಿ ಪಕ್ಷ': ಬಿಜೆಪಿ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಮೋದಿ
ಸರಕಾರಿ ಕಚೇರಿಗೆ ಭೇಟಿ ನೀಡದೇ ಯುಸಿಸಿ ವೆಬ್ ಪೋರ್ಟಲ್ ಅಥವಾ ಆಪ್ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರಾಖಂಡ ಯುಸಿಸಿಯ ನಿಯಮಗಳ ರಚನೆಗೆ ಸಂಬಂಧಿಸಿದ ಪರಿಶೀಲನಾ ಸಭೆಯು ಬಿಜಾಪುರ ಅತಿಥಿ ಗೃಹದಲ್ಲಿ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ಯುಸಿಸಿ ಸಮಿತಿಯ ಸದಸ್ಯ ಶತ್ರುಘ್ನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿತ್ತು.
ಗೃಹ, ಪೊಲೀಸ್, ಆರೋಗ್ಯ, ಅಬಕಾರಿ, ಅಲ್ಪಸಂಖ್ಯಾತ, ಸಂಸ್ಕೃತಿ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ಯೋಜನೆ ಮತ್ತು ಹಣಕಾಸು ಇಲಾಖೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಉತ್ತರಾಖಂಡ ಯುಸಿಸಿಯ ನಿಯಮಗಳನ್ನು ರೂಪಿಸಲು ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಈ ಸಭೆಯಲ್ಲಿ ಕೂಲಂಕಷವಾಗಿ ಚರ್ಚೆ ನಡೆಸಲಾಗಿತ್ತು.
ರಾಧಾ ರತುರಿ ಮತ್ತು ಶತ್ರುಘ್ನ ಸಿಂಗ್ ಅವರು ಯುಸಿಸಿ ಅನುಷ್ಠಾನಕ್ಕೆ ಮಾಡಬೇಕಾದ ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಸಹಕರಿಸಲು ಮತ್ತು ಸಮನ್ವಯಗೊಳಿಸಲು ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆಯ ಮೂಲಕ ತಿಳಿಸಲಾಗಿದೆ.
ಬಿಜೆಪಿ ಸರ್ಕಾರವು ಈ ವರ್ಷದ ಫೆಬ್ರವರಿ 6 ರಂದು ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಿ, ಫೆಬ್ರವರಿ ತಿಂಗಳಲ್ಲಿ ಸರಳ ಬಹುಮತದೊಂದಿಗೆ ಅಂಗೀಕರಿಸಲಾಗಿತ್ತು
ಇದನ್ನು ಓದಿ: ಮತ್ತೆ ಮುನ್ನೆಲೆಗೆ ಬಂದ ಜಾತಿಗಣತಿ ವರದಿ: ಒಕ್ಕಲಿಗ ಸಮುದಾಯದ ನಿಲುವೇನು?