ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಾವಿನ ನಡುವೆ ಇಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಗಂಡು ಮಕ್ಕಳಿಗೆ ಉಚಿತ ಶಿಕ್ಷಣ, ಅಗತ್ಯ ವಸ್ತುಗಳ ಬೆಲೆಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು, ಧಾರಾವಿ ಪುನರಾಭಿವೃದ್ಧಿ ಯೋಜನೆಯನ್ನು ರದ್ದುಗೊಳಿಸುವುದು ಅವರ ಪ್ರಮುಖ ಚುನಾವಣಾ ಭರವಸೆಗಳಾಗಿವೆ.
ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಠಾಕ್ರೆ, "ನಮ್ಮ ಬಹುತೇಕ ಚುನಾವಣಾ ಭರವಸೆಗಳು ಮಹಾ ವಿಕಾಸ್ ಅಘಾಡಿ (ಎಂವಿಎ)ಯ ಒಟ್ಟಾರೆ ಭರವಸೆಗಳ ಭಾಗವಾಗಿದೆ. ಆದರೆ, ಕೆಲವು ಅಂಶಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಬೇಕಿದೆ" ಎಂದು ಹೇಳಿದರು.
ಮಹಾ ವಿಕಾಸ್ ಆಘಾಡಿಯು ಶಿವಸೇನೆ (ಯುಬಿಟಿ) ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ (ಎಸ್ಪಿ) ಒಳಗೊಂಡ ಮೈತ್ರಿ ಒಕ್ಕೂಟ. ಈ ಒಕ್ಕೂಟ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಇದಕ್ಕೂ ಮುನ್ನವೇ ಪಂಚ ಗ್ಯಾರಂಟಿಯನ್ನು ಘೋಷಿಸಿದೆ.
ಸರ್ಕಾರದ ನೀತಿಯನುಸಾರ ರಾಜ್ಯದಲ್ಲಿ ಮಹಿಳಾ ವಿದ್ಯಾರ್ಥಿಗಳು ಉಚಿತ ಶಿಕ್ಷಣವನ್ನು ಹೇಗೆ ಪಡೆಯುತ್ತಿದ್ದಾರೋ ಹಾಗೆಯೇ ಎಂವಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ಪುರುಷ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣಾ ನೀತಿ ಜಾರಿಗೆ ತರಲಾಗುವುದು ಎಂದು ಠಾಕ್ರೆ ತಿಳಿಸಿದ್ದಾರೆ.
ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಅಗತ್ಯ ವಸ್ತುಗಳ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲಾಗುವುದು. ಧಾರಾವಿ ಪುನರಾಭಿವೃದ್ಧಿ ಯೋಜನೆ ಮುಂಬೈ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ರದ್ದುಗೊಳಿಸಲಾಗುವುದು. ವೇಗವಾಗಿ ಬೆಳೆಯುತ್ತಿರುವ ನಗರೀಕರಣವನ್ನು ಗಮನದಲ್ಲಿರಿಸಿಕೊಂಡು ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ವಸತಿ ನೀತಿ ರೂಪಿಸಲಾಗುವುದು ಎಂದು ಅವರು ಹೇಳಿದರು.
ಎಂವಿಎ ಅಧಿಕಾರಕ್ಕೆ ಬಂದರೆ ಕೋಳಿವಾಡಾ ಮತ್ತು ಗಾಥನ್‌ಗಳ ಕ್ಲಸ್ಟರ್ ಅಭಿವೃದ್ಧಿಯನ್ನು ರದ್ದು ಮಾಡಲಾಗುವುದು. ಈ ಪ್ರಕ್ರಿಯೆಗೆ ಮುನ್ನ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದಿರುವ ಅವರು, ನಮ್ಮ ಪಕ್ಷ ಉದ್ಯೋಗ ಸೃಷ್ಟಿಯತ್ತ ಕೆಲಸ ಮಾಡಲಿದೆ ಎಂದರು.
ಪಂಚ ಗ್ಯಾರಂಟಿ ಘೋಷಿಸಿದ ಎಂವಿಎ: ಬುಧವಾರ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಹಾ ವಿಕಾಸ ಆಘಾಡಿ ಬೃಹತ್ ಸಮಾವೇಶ ನಡೆಸಿತು. ಈ ವೇಳೆ ಎಂವಿಎ ಮಿತ್ರ ಪಕ್ಷದ ನಾಯಕರು ಕೂಡ ಉಪಸ್ಥಿತರಿದ್ದರು. ಸಮಾವೇಶದಲ್ಲಿ ಮಹಾರಾಷ್ಟ್ರ ಜನರಿಗೆ ಐದು ಗ್ಯಾರಂಟಿಗಳನ್ನು ಘೋಷಿಸಲಾಯಿತು.
ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಎಲ್ಲಾ ಬಡ ಮಹಿಳೆಯರಿಗೆ ಮಾಸಿಕ 3,000 ರೂ ನೀಡುವುದು, ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಬಸ್ ಪ್ರಯಾಣ, ರೈತರ 3 ಲಕ್ಷದವರೆಗಿನ ಸಾಲ ಮನ್ನಾ, ನಿಯಮಿತವಾಗಿ ತಮ್ಮ ಬಾಕಿ ಮರುಪಾವತಿ ಮಾಡುವವರಿಗೆ 50,000 ರೂ.ಯಿಂದ 25 ಲಕ್ಷದವರೆಗೆ ಆರೋಗ್ಯ ವಿಮೆ ಮತ್ತು ಉಚಿತ ಔಷಧಗಳು, ನಿರುದ್ಯೋಗಿ ಯುವಕರಿಗೆ ಮಾಸಿಕ 4,000 ರೂ. ಮತ್ತು ಜಾತಿ ಗಣತಿ ಮತ್ತು ಕೋಟಾಗಳ ಮೇಲಿನ ಶೇ 50ರಷ್ಟ ತಡೆ ಮೀಸಲಾತಿ ತೆಗೆದು ಹಾಕುವುದು ಎಂದು ಎಂವಿಎ ಘೋಷಣೆ ಮಾಡಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಭಾರತೀಯ ಆರ್ಥಿಕತೆಗೆ ಬೂಸ್ಟ್: ತಜ್ಞರ ಅಭಿಮತ