ಗುವಾಹಟಿ (ಅಸ್ಸೋಂ): ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಅಸ್ಸೋಂ ಸರ್ಕಾರ ಬಹಳ ಹಿಂದಿನಿಂದಲೂ ಚಿಂತನೆ ನಡೆಸುತ್ತಿದೆ. ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರ ಯುಸಿಸಿಯನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸುವ ಮುನ್ಸೂಚನೆ ನೀಡಿದೆ. ಆದರೆ, ಲೋಕಸಭೆ ಚುನಾವಣೆ ಮುಗಿದ ನಂತರವೇ ಇದು ಜಾರಿಯಾಗಲಿದೆ. ಸಾರ್ವತ್ರಿಕ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರ ಯುಸಿಸಿಯನ್ನು ಜಾರಿಗೆ ತರಲಿದೆ ಎಂದು ಅಸ್ಸೋಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕೇಂದ್ರ ಕಚೇರಿ ವಾಜಪೇಯಿ ಭವನದಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಮುಂಬರುವ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಶರ್ಮಾ, 'ಕರೀಂಗಂಜ್, ನಾಗಾಂವ್‌ನಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದ್ದು, ಅಂತಿಮವಾಗಿ ಬಿಜೆಪಿ ಗೆಲ್ಲಲಿದೆ. 11 ಸ್ಥಾನಗಳಲ್ಲಿ ಬಿಜೆಪಿಗೆ ಪೈಪೋಟಿ ಇಲ್ಲ. ನಾಗಾದಲ್ಲಿ ಕಾಂಗ್ರೆಸ್ - ಎಐಯುಡಿಎಫ್ - ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಎಪಿಸಿಸಿ ಮುಖ್ಯಸ್ಥ ಭೂಪೇನ್ ಬೋರಾ ಅವರನ್ನು ಉಲ್ಲೇಖಿಸಿ, ಮುಖ್ಯಮಂತ್ರಿ ಶರ್ಮಾ ಅವರು ಭೂಪೇನ್ ಮುಖ್ಯಮಂತ್ರಿಯಾಗಲು ಬಯಸಿದರೆ, ಅವರು ಬಿಜೆಪಿಗೆ ಸೇರಬೇಕಾಗುತ್ತದೆ ಎಂದು ಪುನರುಚ್ಚರಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 6 ರಂದು ರಾಜ್ಯದ ಲಖಿಂಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಗಮನಾರ್ಹ. ಈ ಪ್ರಚಾರ ಸಭೆಯಲ್ಲಿ ಕಾರ್ಯತಂತ್ರ ರೂಪಿಸುವುದಲ್ಲದೇ, ಎಜಿಪಿಯ ಕಾರ್ಯಕಾರಿ ಗುಂಪಿನ ಸದಸ್ಯರ ಕಾರ್ಯವೈಖರಿ ಕುರಿತು ಕೂಲಂಕಷವಾಗಿ ಚರ್ಚಿಸುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಮೈತ್ರಿಕೂಟದ ಇತರ ಘಟಕಗಳಾದ ಯುಪಿಪಿಎಲ್ ಮತ್ತು ಗಣ ಶಕ್ತಿ ಚುನಾವಣೆಗೆ ಸಮನ್ವಯತೆಯಿಂದ ಪ್ರಚಾರ ನಡೆಸಲಿವೆ. ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವ ಶರ್ಮಾ ಅವರು ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ರಾಜ್ಯಾದ್ಯಂತ ಮ್ಯಾರಥಾನ್ ಅಭಿಯಾನಕ್ಕೆ ಸಿದ್ಧತೆ ನಡೆಸಿದ್ದಾರೆ.