ಡೆಹ್ರಾಡೂನ್ (ಉತ್ತರಾಖಂಡ) : ಸರ್ವ ಧರ್ಮಗಳಿಗೆ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಯನ್ನು ವಿಧಾನಸಭೆಯಲ್ಲಿ ಮಂಡಿಸಿರುವ ಉತ್ತರಾಖಂಡ ಸರ್ಕಾರ ಬುಧವಾರ ಅದನ್ನು ಸದನದಲ್ಲಿ ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆ ಇದೆ. ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಧಾಮಿ ಅವರು ಮಂಗಳವಾರವಾದ ನಿನ್ನೆ ಮಹತ್ವದ ಯುಸಿಸಿ ಮಸೂದೆಯನ್ನು ಮಂಡಿಸಿದರು. ಸಂಜೆ 6 ಗಂಟೆಯವರೆಗೆ ಮಸೂದೆಯ ಮೇಲೆ ಚರ್ಚೆ ನಡೆಸಲಾಯಿತು. ಈ ವೇಳೆ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸರ್ಕಾರವು ತರಾತುರಿಯಲ್ಲಿ ಯುಸಿಸಿ ಜಾರಿಗೆ ತರಲು ನಿರ್ಧರಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಯುಸಿಸಿ ಕರಡನ್ನು ಪೂರ್ಣ ಅಧ್ಯಯನ ಮಾಡಲು ಸಮಯ ನೀಡಿಲ್ಲ ಎಂದು ದೂರಿದವು.
ಬಿಜೆಪಿಗೆ ಪೂರ್ಣ ಬಹುಮತ: ಉತ್ತರಾಖಂಡ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇಂದು ಯುಸಿಸಿ ಬಗ್ಗೆ ಚರ್ಚೆ ನಡೆದ ಬಳಿಕ ಮಸೂದೆಗೆ ಇಂದೇ ಅಂಗೀಕಾರ ಸಿಗಲಿದೆ ಎಂದು ಸರ್ಕಾರ ಆಶಿಸಿದೆ. ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇರುವುದರಿಂದ ಮಸೂದೆ ಪೂರ್ಣ ಬಹುಮತದಿಂದ ಪಾಸಾಗುವ ಎಲ್ಲ ಸಾಧ್ಯತೆ ಇದೆ. ಸದನದಲ್ಲಿ ಬಿಜೆಪಿ 47 ಶಾಸಕರನ್ನು ಹೊಂದಿದ್ದರೆ, ವಿರೋಧ ಪಕ್ಷವಾದ ಕಾಂಗ್ರೆಸ್ 19 ಶಾಸಕರು, ಇತರ 4 ಶಾಸಕರು ಇದ್ದಾರೆ.
ಯುಸಿಸಿ ಮಸೂದೆಯನ್ನು ಮಂಡಿಸಿದ ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಮಂಗಳವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ವಿಪಕ್ಷಗಳ ತೀವ್ರ ವಿರೋಧ ಮತ್ತು ಕಾನೂನು ತೊಡಕುಗಳ ಬಗ್ಗೆ ಅನುಮಾನವಿದ್ದ ಕಾರಣ ಅವರು, ಯಾವುದೇ ಹೇಳಿಕೆ ನೀಡಿರಲಿಲ್ಲ. ವಿಧಾನಸಭೆಯಲ್ಲಿಂದು ವಿಧೇಯಕ ಅಂಗೀಕಾರವಾಗಲಿದ್ದು, ಬಳಿಕ ಮುಖ್ಯಮಂತ್ರಿ ಸರ್ಕಾರದ ಪರವಾಗಿ ತಮ್ಮ ವಾದ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸದನದಲ್ಲಿ ಮಾತನಾಡಿದ ಸಿಎಂ ಧಾಮಿ ಅವರು, ಸರ್ವಧರ್ಮಗಳನ್ನು ಸಮನಾಗಿ ಕಾಣಲು ಈ ಮಸೂದೆಯನ್ನು ಮಂಡಿಸಲಾಗಿದೆ. ಎಲ್ಲ ಮಹಿಳೆಯರಿಗೆ ಸಮಾನ ಅವಕಾಶ, ಹಕ್ಕು ಇದರಿಂದ ಸಿಗಲಿದೆ. ವಿಪಕ್ಷಗಳ ಮಸೂದೆಗೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.
ಯುಸಿಸಿ ಜಾರಿ ಬಳಿಕ ಕಾನೂನುಗಳು ಬದಲು: ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಿದ ಬಳಿಕ ರಾಜ್ಯದಲ್ಲಿನ ಅನೇಕ ಕಾನೂನುಗಳು ಬದಲಾಗಲಿವೆ. ಮದುವೆ ನೋಂದಣಿ, ಆಸ್ತಿ ಹಂಚಿಕೆ, ವಿಚ್ಛೇದನ ಹಾಗೂ ಲಿವ್ ಇನ್ರಿಲೇಷನ್ಸ್ಗೆ ಕಾನೂನು ಮಾನ್ಯತೆ ಸಿಗಲಿದೆ. ರಾಜ್ಯಪಾಲರ ಅಂಕಿತವಾದ ಬಳಿಕ ಇದು ರಾಜ್ಯದಲ್ಲಿ ಜಾರಿಯಾಗಲಿದೆ.
ಇದನ್ನೂ ಓದಿ: ಉತ್ತರಾಖಂಡ ಯುಸಿಸಿ ಮಸೂದೆ: ಸಹಜೀವನಕ್ಕೆ ಹೆತ್ತವರ ಒಪ್ಪಿಗೆ ಕಡ್ಡಾಯ, ನೋಂದಣಿಯೂ ಅಗತ್ಯ