ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ದುರ್ಮರಣಕ್ಕೆ ಈಡಾದವರು ರೈಲ್ವೆ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು ಮತ್ತು ರೀಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಮಜೌಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಸಾ ಹಾಲ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ. ನವದೆಹಲಿ ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲು ಅತಿವೇಗದಲ್ಲಿ ಬಂದಿದ್ದರಿಂದ ರೀಲ್ಸ್ನಲ್ಲಿ ತೊಡಗಿದ್ದ ಯುವಕರ ಮೇಲೆ ಹರಿದಿದೆ.
ಮೃತರನ್ನು ಕನ್ಹಯ್ಯ ಕುಮಾರ್ ಮತ್ತು ಸೂರಜ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಪಶ್ಚಿಮ ಚಂಪಾರಣ್ ಜಿಲ್ಲೆಯ ಅಂವಾ ಬೈರಾಗಿ ಗ್ರಾಮದವರಾಗಿದ್ದಾರೆ. ಮಜೌಲಿಯಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಖಿಲೇಶ್ ಕುಮಾರ್ ಮಿಶ್ರಾ ಅವರು ಅಪಘಾತವನ್ನು ದೃಢಪಡಿಸಿದ್ದಾರೆ. "ಸಂತ್ರಸ್ತರು ಇಯರ್‌ಫೋನ್‌ಗಳನ್ನು ಹಾಕಿಕೊಂಡು ರೈಲ್ವೆ ಹಳಿ ಮೇಲೆ ರೀಲ್ಸ್ನಲ್ಲಿ ತೊಡಗಿಸಿಕೊಂಡಿದ್ದರು. ರೈಲು ತಮ್ಮ ಬಳಿಗೆ ಬರುತ್ತಿರುವುದು ಅವರ ಅರಿವಿಗೆ ಬಂದಿಲ್ಲ. ಹೀಗಾಗಿ ಎಕ್ಸ್‌ಪ್ರೆಸ್ ರೈಲು ಅವರ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಎಸ್‌ಎಚ್‌ಒ ಮಿಶ್ರಾ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಇದೇ ವೇಳೆ, ತಿಳಿಸಿದ್ದಾರೆ.
ಇಯರ್‌ಫೋನ್ ಹಾಕಿಕೊಂಡರು ದೊಡ್ಡ ಶಬ್ದ ಕೇಳಿಸುತ್ತದೆ. ಆದರೆ ಈ ಯುವಕರು ರೀಲ್ಸ್ ಮಾಡುವುದರಲ್ಲಿ ಮುಳಗಿ ಹೋಗಿದ್ದರಿಂದ ರೈಲು ಬರುವ ಶಬ್ದ ಕೇಳದೇ ವೇಗವಾಗಿ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಶವಗಳನ್ನು ಶವಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಪೊಲೀಸರು ಅದನ್ನು ತಡೆದು ಯುವಕರ ಕಳೆಬರಹಗಳನ್ನು ಬೆಟ್ಟಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನು ಓದಿ: ಎಲ್ಲ ರೀತಿಯ ಮೀಸಲಾತಿಗೆ ನೆಹರು ವಿರುದ್ಧವಾಗಿದ್ದರು: ರಾಜ್ಯಸಭೆಯಲ್ಲಿ ಮೋದಿ