ಮಹೋಬಾ(ಉತ್ತರ ಪ್ರದೇಶ): ಎರಡು ಲಾರಿಗಳು ಮುಖಾಮುಖಿ ಅಪಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದ ಮಹೋಬ ಜಿಲ್ಲೆಯ ಕಾನ್ಪುರ-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಕೆನ್ನಾಲಿಗೆಗೆ ಲಾರಿಗಳ ಚಾಲಕರಿಬ್ಬರೂ ಸಜೀವ ದಹನವಾಗಿದ್ದಾರೆ. ಭೈಸೋರಾ ಗ್ರಾಮದ ನಿವಾಸಿ ವಿಪಿನ್ ಮೌರ್ಯ (35) ಹಾಗೂ ಕಾನ್ಪುರದ ನಿವಾಸಿ ರಾಜ್‌ಕುಮಾರ್ ಪಾಲ್ ಮೃತರೆಂದು ಗುರುತಿಸಲಾಗಿದೆ.
ಭೀಕರ ಅಪಘಾತದ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಲಾರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಪೊಲೀಸರು ಕ್ರೇನ್ ಸಹಾಯದಿಂದ ಲಾರಿಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರ ಸುಗಮಗೊಳಿಸಿದರು. ಮೃತದೇಹಗಳನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.
"ಖನ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ್ಪುರ-ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಟ್ರಕ್‌ಗಳು ಬೆಂಕಿಯಿಂದ ಸುಟ್ಟು ಹೋಗಿವೆ. ಚಾಲಕರಿಬ್ಬರೂ ಮೃತಪಟ್ಟಿದ್ದಾರೆ. ಘಟನೆಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಟ್ರಕ್‌ಗಳು ಬೆಂಕಿ ಚೆಂಡುಗಳಂತೆ ಉರಿಯುತ್ತಿದ್ದವು. ಸ್ಥಳದಲ್ಲಿ ಜನರ ಗುಂಪು ಜಮಾಯಿಸಿತ್ತು. ಅಗ್ನಿಶಾಮಕ ದಳದ ಸಾಕಷ್ಟು ಪ್ರಯತ್ನದ ಬಳಿಕವೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಚಾಲಕರ ಮೃತದೇಹಗಳನ್ನು ಹೊರತೆಗೆದು ಶವಾಗಾರದಲ್ಲಿ ಇರಿಸಲಾಗಿದೆ. ಟ್ರಕ್‌ಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ನಿಯಂತ್ರಣ ಕೊಠಡಿಯಿಂದ ಮಾಹಿತಿ ಲಭಿಸಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯಂ ತಿಳಿಸಿದರು.
ಪಥರ್ ಮಂಡಿ ಕಬ್ರಾಯ್‌ನಿಂದ ಬ್ಯಾಲೆಸ್ಟ್ ತುಂಬಿದ ಲಾರಿಯೊಂದು ಕಾನ್ಪುರ ಕಡೆಗೆ ಹೋಗುತ್ತಿತ್ತು. ಇನ್ನೊಂದು ಖಾಲಿ ಲಾರಿ ಮಹೋಬ ಕಡೆಗೆ ಬರುತ್ತಿತ್ತು. ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ: ಸಿಲ್ಕ್ಯಾರಾ ಸುರಂಗದಲ್ಲಿ ಯಂತ್ರ ಪಲ್ಟಿಯಾಗಿ ಕಾರ್ಮಿಕ ಸಾವು - SILKYARA TUNNEL