ಹೈದರಾಬಾದ್(ತೆಲಂಗಾಣ): ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ತೆಗೆದುಹಾಕಿದ ವಿಚಾರಕ್ಕೆ ನಡೆದ ಜಗಳ ಇಬ್ಬರ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ 6 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕಡಕಲ್ ಮಂಡಲದ ಗೋವಿಂದಾಯಪಲ್ಲಿಯ ಶೇಷುಗರಿ ಶಿವಗೌಡ್ (27) ಮತ್ತು ಗುಂಡೇಮೋನಿ ಶಿವಗೌಡ್ (25) ಎಂದು ಗುರುತಿಸಲಾಗಿದೆ.
ಶೇಷುಗರಿ ಕಾರು ಚಾಲಕನಾಗಿ, ಶಿವಗೌಡ ಹೈದರಾಬಾದ್‌ನ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ ಬೆಳಗ್ಗೆ ಇಬ್ಬರ ಶವಗಳು ಕಡತಲ್‌ನ ಬಟರ್‌ಫ್ಲೈ ಸಿಟಿಯ ವಿಲ್ಲಾದಲ್ಲಿ ಪತ್ತೆಯಾಗಿವೆ.
ಈ ವಿಲ್ಲಾವನ್ನು ಸ್ಥಳೀಯ ಬಿಜೆಪಿ ಮುಖಂಡ ಜಲಕಂ ರವಿ ಎಂಬವರು ಕೆಲವು ದಿನಗಳ ಹಿಂದೆ ತಮ್ಮ ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಬಾಡಿಗೆಗೆ ಪಡೆದಿದ್ದರು. ರವಿ ಜತೆ ಕೊಲೆಯಾದ ಶೇಷುಗರಿ ಹಾಗೂ ಶಿವಗೌಡ್ ಅವರಿಗೆ ಈ ಹಿಂದಿನಿಂದಲೂ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂದು ತಿಳಿದುಬಂದಿದೆ.
ಘಟನೆಯ ಪೂರ್ಣ ವಿವರ: ಜೂನ್ 4ರಂದು ರವಿ ಜನ್ಮದಿನವಿತ್ತು. ವಿಲ್ಲಾದಲ್ಲಿ ಸ್ನೇಹಿತರು ಮತ್ತು ಕೆಲವು ಸ್ಥಳೀಯ ಮುಖಂಡರೊಂದಿಗೆ ಜನ್ಮದಿನ ಆಚರಿಸಲಾಗಿತ್ತು. ತಮ್ಮ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸಂಭ್ರಮಾಚರಣೆಯ ಫೋಟೋಗಳನ್ನು ಹಾಕಿದ್ದರು. ಈ ವೇಳೆ ಗುಂಪಿನಲ್ಲಿದ್ದ ಶೇಷುಗರಿ ಮತ್ತು ಶಿವಗೌಡ ಅವರನ್ನು ತೆಗೆದುಹಾಕಲಾಗಿತ್ತು. ಮೊದಲೇ ಇವರೊಂದಿಗೆ ವೈಮನಸ್ಸು ಹೊಂದಿದ್ದ ರವಿ ತನ್ನ ಆಪ್ತರೊಂದಿಗೆ ಸೇರಿ ಇಬ್ಬರ ವಿರುದ್ಧ ಷಡ್ಯಂತ್ರ ರೂಪಿಸಿದ್ದ.
ಅಂತೆಯೇ, ಬುಧವಾರ ಸಂಜೆ ಕಡಕಲ್‌ನಲ್ಲಿರುವ ವಿಲ್ಲಾಕ್ಕೆ ಶೇಷುಗರಿ ಮತ್ತು ಶಿವಗೌಡ ಅವರನ್ನು ಕರೆಸಲಾಗಿತ್ತು. ಆಗ ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ತೆಗೆದುಹಾಕಿದ ವಿಷಯ ಪ್ರಸ್ತಾಪಿಸಿ ರವಿ ಮತ್ತು ಅವರ ಸ್ನೇಹಿತರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ರವಿ ಮತ್ತು ಆತನ ಸ್ನೇಹಿತರು ಸೇರಿಕೊಂಡು ಇಬ್ಬರಿಗೂ ಚಾಕುವಿನಿಂದ ಇರಿದು ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ.
ಬುಧವಾರ ರಾತ್ರಿ ಕಳೆದರೂ ಶೇಷುಗರಿ ಮನೆ ಬಂದಿಲ್ಲ. ಹೀಗಾಗಿ ಮರು ದಿನ ಅವರನ್ನು ಹುಡುಕಿಕೊಂಡು ಸಹೋದರ ಕರುಣಾಕರ್ ವಿಲ್ಲಾಕ್ಕೆ ಬಂದಿದ್ದಾರೆ. ಈಗ ಇಬ್ಬರೂ ಸಹ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ.
ಈ ಹತ್ಯೆಗಳಲ್ಲಿ ಭಾಗಿಯಾಗಿದ ಆರೋಪದಡಿ ಆರು ಜನರನ್ನು ಗುರುವಾರ ಬಂಧಿಸಲಾಗಿದೆ. ಮತ್ತೊಂದೆಡೆ, ಆರೋಪಿಗಳ ವಿರುದ್ಧ ಮೃತರ ಕುಟುಂಬಸ್ಥರು ಹೈದರಾಬಾದ್-ಶ್ರೀಶೈಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದಾರೆ.
ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಗ್ಯಾಂಗ್ವಾರ್; ಕೈದಿಗೆ ಚಾಕು ಇರಿತ