ತಿರುವನಂತರಪುರ: ಈ ಬಾರಿ ಬೇಸಿಗೆಯ ಬಿಸಿಲು ಹೆಚ್ಚಿದ್ದು, ಎಲ್ಲೆಡೆ ಜನರು ಸೂರ್ಯನ ತಾಪದಿಂದ ಬಳಲುತ್ತಿದ್ದಾರೆ. ಈ ನಡುವೆ ಕೇರಳದಲ್ಲಿ ಸೂರ್ಯನ ಪ್ರಖರತೆ ಹೆಚ್ಚಿದ್ದು, ಸನ್ಸ್ಟ್ರೋಕ್ನಿಂದ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ. ಕೇರಳದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನ ಸೂರ್ಯನ ಪ್ರಖರತೆ ಹೆಚ್ಚಿದ್ದು, ಮುನ್ನಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿದೆ.
ಕೇರಳದಲ್ಲಿ ಬಿಸಿಲಿನ ತಾಪದಿಂದ ಸಾವನ್ನಪ್ಪಿದವರನ್ನು ಪಾಲಕ್ಕಾಡ್ನ 90 ವರ್ಷದ ಇ ಲಕ್ಷ್ಮಿ ಮತ್ತು ಕಣ್ಣೂರು ಜಿಲ್ಲೆಯ ಚೊಕ್ಲಿಯ 53 ವರ್ಷದ ವಿಶ್ವನಾಥನ್ ಎಂದು ಗುರುತಿಸಲಾಗಿದೆ.
ಶನಿವಾರ ಎಲಪುಳ್ಳಿಯ ಕಾಲುವೆಯಲ್ಲಿ ಸುಟ್ಟಗಾಯಗಳೊಂದಿಗೆ ಬಳಲುತ್ತಿದ್ದ ಲಕ್ಷ್ಮಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಅವರು ಸಾವನ್ನಪ್ಪಿದ್ದಾರೆ. ಭಾನುವಾರ ನಡೆದ ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಬಿಸಿಲಿನಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ವಿಶ್ವನಾಥನ್ ಅವರು ಬಾವಿಯನ್ನು ಅಗೆಯುವಾಗ ಸುಟ್ಟ ಗಾಯಗಳಿಂದ ಬಳಲಿದ ನಂತರ ಅಸೌಖ್ಯ ಮತ್ತು ತಲೆಸುತ್ತುವಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರೂ ಭಾನುವಾರ ಮೃತಪಟ್ಟಿದ್ದು, ಸಾವಿಗೆ ಬಿಸಿಲ ತಾಪವೂ ಕಾರಣ ಎನ್ನಲಾಗಿದೆ.
ಪಾಲಕ್ಕಾಡ್, ಕೊಲ್ಲಂ ಮತ್ತು ತ್ರಿಸ್ಸೂರಿನಲ್ಲಿ ಸೋಮವಾರ ಸಂಜೆಯವರೆಗೆ ಶಾಖದ ಅಲೆ ಕುರಿತು ಎಚ್ಚರಿಕೆ ನೀಡಲಾಗಿದೆ. ಭಾನುವಾರ ಪಾಲಕ್ಕಾಡ್ನಲ್ಲಿ ಒಂದೇ ದಿನಕ್ಕೆ 5.3ರಷ್ಟು ತಾಪಮಾನ ಹೆಚ್ಚಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿರುವ ಹಿನ್ನೆಲೆ ಅಂಗನವಾಡಿಗಳಿಗೆ ಒಂದು ವಾರದ ರಜೆ ಘೋಷಿಸಲು ಕೇರಳ ಸರ್ಕಾರ ಆದೇಶಿಸಿದೆ. ಜನರು ಈ ಬಿಸಿಲಿನ ತಾಪದಿಂದ ಮತ್ತು ಹೀಟ್ಸ್ಟ್ರೋಕ್ನಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಇರುವಂತೆ ಹಾಗೂ ಅಗತ್ಯ ಮುನ್ನಚ್ಚರಿಕೆವಹಿಸುವಂತೆ ರಾಜ್ಯ ವಿಪತ್ತು ನಿರ್ವಾಹಣ ಪ್ರಾಧಿಕಾರ ಸಲಹೆ ನೀಡಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನವು ಸುಮಾರು 41 ಡಿಗ್ರಿ ಸೆಲ್ಸಿಯಸ್ ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ಕೊಟ್ಟಾಯಂ, ಪತ್ತನಂತಿಟ್ಟ, ಕೋಝಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ 38 ಡಿಗ್ರಿ ಸೆಲ್ಸಿಯಸ್ ಮತ್ತು ಆಲಪ್ಪುಳ, ಎರ್ನಾಕುಲಂ, ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಯಲ್ಲಿ 37ಸೆ ತಾಪಮಾನ ದಾಖಲಾಗಿದ್ದು, ಏಪ್ರಿಲ್ 28 ರಿಂದ ಮೇ 2ರ ಅವಧಿಯಲ್ಲಿ ತಿರುವನಂತಪುರಂ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಆರ್ದ್ರತೆಯ ಮಟ್ಟ ಹೆಚ್ಚಳದಿಂದ ಗುಡ್ಡಗಾಡು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರೆಯುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಸುಡು ಬಿಸಿಲು, ವಿಪರೀತ ಸೆಕೆ: ಮತದಾನಕ್ಕೆ ಬಂದ ಮೂವರು ವೃದ್ಧರು ಪ್ರಜ್ಞೆ ತಪ್ಪಿ ಸಾವು