ನವದೆಹಲಿ: ಗುಜರಾತ್‌ನ ಪೋರ್‌ಬಂದರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮಂಗಳವಾರ ರಾತ್ರಿ ಸಹಾಯಕ್ಕಾಗಿ ತೆರಳಿದ್ದ ಭಾರತೀಯ ಕೋಸ್ಟ್ ಗಾರ್ಡ್ (ICG) ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ALH) ಸಮುದ್ರದಲ್ಲಿ ಪತನಗೊಂಡಿದ್ದು, ನಾಪತ್ತೆಯಾಗಿದ್ದ ಮೂವರಲ್ಲಿ ಇಬ್ಬರ ಮೃತದೇಹ ದೊರೆತಿದೆ. ಹೆಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು. ಓರ್ವ ಸಿಬ್ಬಂದಿಯನ್ನು ಮೊದಲೇ ರಕ್ಷಿಸಲಾಗಿತ್ತು.
ಕಮಾಂಡೆಂಟ್ಗಳಾದ ವಿಪಿನ್ ಬಾಬು ಮತ್ತು ಪಿಎನ್‌ವಿಕೆ ಕರಣ್ ಸಿಂಗ್ ಅವರ ಮೃತದೇಹಗಳು ಸಿಕ್ಕಿದ್ದು, ಮತ್ತೋರ್ವರಿಗಾಗಿ ಶೋಧ ನಡೆಸಲಾಗುತ್ತಿದೆ. ಹೆಲಿಕಾಪ್ಟರ್‌ನ ಅವಶೇಷಗಳೂ ಪತ್ತೆಯಾಗಿವೆ. ಆದರೆ, ಹೆಲಿಕಾಪ್ಟರ್ ತುರ್ತು ಭೂಸ್ಪರ್ಶಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೋರ್‌ಬಂದರ್ ಕೋಸ್ಟ್ ಗಾರ್ಡ್ ಡಿಐಜಿ ಪಂಕಜ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಪೋರ್‌ಬಂದರ್ ಕರಾವಳಿಯ 45 ಕಿ.ಮೀ ದೂರದಲ್ಲಿ ತೈಲ ಟ್ಯಾಂಕರ್ ಹರಿ ಲೀಲಾದಿಂದ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ ಅನ್ನು ಸೆಪ್ಟೆಂಬರ್ 2ರಂದು ರಾತ್ರಿ 11 ಗಂಟೆಗೆ ಕಳುಹಿಸಿದಾಗ ಈ ಘಟನೆ ಸಂಭವಿಸಿತ್ತು.
ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಗಾಗಿ 4 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿತ್ತು. ಗುಜರಾತ್‌ನಲ್ಲಿ ಇತ್ತೀಚಿನ ಚಂಡಮಾರುತದ ವಾತಾವರಣದಲ್ಲಿ 67 ಜೀವಗಳನ್ನು ಉಳಿಸಿದ ಹೆಲಿಕಾಪ್ಟರ್ ಅನ್ನು ಭಾರತೀಯ ಧ್ವಜದ ಮೇಲೆ ಗಂಭೀರವಾಗಿ ಗಾಯಗೊಂಡ ಸಿಬ್ಬಂದಿಯನ್ನು ಸ್ಥಳಾಂತರಿಸಲು ಕಾರ್ಯಾಚರಣೆಗೆ ಕಳುಹಿಸಿಕೊಡಲಾಗಿತ್ತು. ಆದರೆ, ಸ್ಥಳಾಂತರಿಸಲು ಹೆಲಿಕಾಪ್ಟರ್ ಹಡಗಿನ ಬಳಿಗೆ ಬರುತ್ತಿದ್ದಂತೆ ದುರಂತ ಸಂಭವಿಸಿದೆ ಎಂದು ಪಂಕಜ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಹಡಗು: 13 ಭಾರತೀಯರು ಸೇರಿ 16 ಸಿಬ್ಬಂದಿ ನಾಪತ್ತೆ - Oil Ship Capsize