ಅಮರಾವತಿ, ಆಂಧ್ರಪ್ರದೇಶ: ''ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದ ಅಭೂತಪೂರ್ವ ಗೆಲುವಿಗಾಗಿ ರಾಜ್ಯದ ಜನತೆಗೆ ತಲೆಬಾಗುತ್ತೇನೆ'' ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇದೇ ವೇಳೆ ನಾವು ಎನ್ಡಿಎ ಜತೆಗೆ ಇದ್ದೇವೆ. ಇಂದು ಪ್ರಧಾನಿ ಕರೆದಿರುವ ಎನ್ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಉಂಡವಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ''ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಐದು ವರ್ಷಗಳ ಕಾಲ ಈ ರೀತಿಯ ಸರ್ಕಾರವನ್ನು ನೋಡಿರಲಿಲ್ಲ'' ಎಂದರು.
''ಜಗನಮೋಹನ್ ರೆಡ್ಡಿ ಆಡಳಿತದಲ್ಲಿ ಎಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗಳು ಹೇಗೆ ನಲುಗಿವೆ ಎಂಬುದನ್ನು ನಾವು ನೋಡಿದ್ದೇವೆ. ಎಲ್ಲವನ್ನೂ ಅರಿತುಕೊಂಡು ಜನ ನಮಗೆ ಗೆಲವು ನೀಡಿದ್ದಾರೆ. ರಾಜ್ಯವನ್ನು ಎತ್ತಿ ಹಿಡಿಯುವುದೇ ನಮ್ಮ ಧ್ಯೇಯ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ನಾವು ಮುನ್ನಡೆದಿದ್ದೇವೆ. ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ರಾಷ್ಟ್ರ, ಪ್ರಜಾಪ್ರಭುತ್ವ ಮತ್ತು ಪಕ್ಷಗಳು ಶಾಶ್ವತ. ಪಕ್ಷಗಳೂ ಸರಿಯಾಗಿ ಕಾರ್ಯ ನಿರ್ವಹಿಸಿದರೆ ಜನ ಮತ್ತೆ ಬೆಂಬಲಿಸುತ್ತಾರೆ. ಈ ರೀತಿಯ ಐತಿಹಾಸಿಕ ಚುನಾವಣೆಯನ್ನು ನಾನು ನೋಡಿಲ್ಲ'' ಎಂದರು.
ಅಮೆರಿಕದ ವ್ಯಕ್ತಿಯೂ ಬಂದು ನಮ್ಮೊಂದಿಗೆ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಕೆಲಸಕ್ಕೆ ಹೋದವರೂ ಬಂದು ಮತ ಹಾಕಿ ಗೆಲ್ಲಿಸಿದ್ದಾರೆ. ಟಿಡಿಪಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಚುನಾವಣೆ ಇದು. 1983ರಲ್ಲಿ ಎನ್‌ಟಿಆರ್ ತಮ್ಮ ಪಕ್ಷವನ್ನು ಸ್ಥಾಪಿಸಿದಾಗ 200 ಸ್ಥಾನಗಳನ್ನು ಗೆದ್ದರು. ಅದಾದ ನಂತರ ಫಲಿತಾಂಶಗಳು ಅನಿರೀಕ್ಷಿತವಾಗಿದ್ದವು. ಮೈತ್ರಿಕೂಟಕ್ಕೆ ಶೇ.55.38ರಷ್ಟು ಮತಗಳು ಲಭಿಸಿವೆ. 45.60 ರಷ್ಟು ಟಿಡಿಪಿ ಮತ್ತು 39.37 ರಷ್ಟು ವೈಎಸ್ಆರ್ ಕಾಂಗ್ರೆಸ್ ಪಾಲಾಗಿದೆ'' ಎಂದು ಚಂದ್ರಬಾಬು ನಾಯ್ಡು ಹೇಳಿದರು.
ದೆಹಲಿಯತ್ತ ನಿತೀಶ್ ಕುಮಾರ್: ಇಂದು ಸಂಜೆ ನಡೆಯಲಿರುವ ಎನ್ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಬಿಹಾರ್ ಸಿಎಂ ನಿತೀಶ್ ಕುಮಾರ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇಂಡಿ ಕೂಟದಿಂದ ಡೆಪ್ಯೂಟಿ ಪಿಎಂ ಆಫರ್ ನೀಡಲಾಗಿದೆ ಎಂಬ ಊಹಾಪೋಹದ ನಡುವೆ ನಿತೀಶ್ ಕುಮಾರ್, ಎನ್ಡಿಎ ಸಭೆಯಲ್ಲಿ ಭಾಗವಹಿಸುವುದಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದಿನ ಎನ್ಡಿಎ ಸಭೆ ಬಳಿಕ ಸರ್ಕಾರ ರಚನೆ ಬಗ್ಗೆ ಸ್ಪಷ್ಟತೆ ಲಭ್ಯವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊನೆಯ ಸಚಿವ ಸಂಪುಟ ಸಭೆ - Union Cabinet Last Meeting