ನವದೆಹಲಿ: ದೆಹಲಿಯ ಉತ್ತಮ್ ನಗರ ಪೂರ್ವ ಮತ್ತು ಉತ್ತಮ್ ನಗರ ಪಶ್ಚಿಮ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಯ ಮೇಲೆ ಡ್ರೋನ್ ಕಂಡು ಬಂದಿತ್ತು. ಡ್ರೋನ್ ಕಂಡು ಬಂದ ಹಿನ್ನಲೆ ದೆಹಲಿ ಮೆಟ್ರೋದ ಬ್ಲೂ ಲೈನ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಅಧಿಕಾರಿಗಳು ನೀಡಿರುವ ಪ್ರಕಾರ, ಮಧ್ಯಾಹ್ನ 2.50 ರಿಂದ 3.29ರ ವೇಳೆ ಮೆಟ್ರೋ ಪ್ರಯಾಣದಲ್ಲಿ ಸಂಚಾರ ವ್ಯತ್ಯಯವಾಗಿದೆ. ಟ್ರಾಕ್ ಮೇಲೆ ಡ್ರೋನ್ ಬಿದ್ದಿರುವುದನ್ನು ಗಮನಿಸಿದ ಅಧಿಕಾರಿಗಳು ಮುನ್ನೆಚ್ಚರಿಕ ಕ್ರಮವಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಿದ್ದರು. ಇದರಿಂದ ಉತ್ತಮ್ ನಗರ್ ಪೂರ್ವ ಮತ್ತು ಉತ್ತಮ ನಗರ ಪಶ್ಚಿಮ ನಡುವಿನ ರೈಲು ಸಂಚಾರ ಸ್ತಬ್ಧಗೊಂಡಿತ್ತು.
ಉತ್ತಮ ನಗರ ಪೂರ್ಣ ಮತ್ತು ಜನಕ್‌ಪುರಿ ಪಶ್ಚಿಮದ ನಡುವೆ ಮತ್ತು ಉತ್ತಮ ನಗರ್ ಪಶ್ಚಿಮ ಹಾಗೂ ದ್ವಾರಕ ನಡುವೆ ಏಕಮುಖ ಟ್ರೈನ್ ಸೇವೆ ನೀಡಲಾಯಿತು. ಈ ವೇಳೆ, ಬ್ಲೂ ಲೈನ್‌ನ ಉಳಿದ ವಿಭಾಗಗಳಲ್ಲಿ ಎರಡು ಲೂಪ್‌ಗಳಲ್ಲಿ ರೈಲು ಸೇವೆಗಳನ್ನು ನೀಡಲಾಯಿತು. ಜನಕ್‌ಪುರಿ ಪಶ್ಚಿಮದಿಂದ ವೈಶಾಲಿ ಹಾಗೂ ನೋಯ್ಡಾ ಎಲೆಕ್ಟ್ರಾನಿಕ್ ಸಿಟಿ ಮತ್ತು ದ್ವಾರಕಾದಿಂದ ದ್ವಾರಕಾ ಸೆಕ್ಷನ್ 21 ವಿಭಾಗಗಳ ನಡುವೆ ಸಂಚಾರ ಎಂದಿನಂತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದ್ವಾರಕಾ ಸೆಕ್ಟರ್ 21 ರಿಂದ ನೋಯ್ಡಾ ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಶಾಲಿವರೆಗಿನ ಸಂಪೂರ್ಣ ಬ್ಲೂ ಲೈನ್‌ನಲ್ಲಿ ಸಾಮಾನ್ಯ ಸೇವೆಗಳು ಭದ್ರತಾ ಅನುಮತಿಯ ನಂತರ ಮಧ್ಯಾಹ್ನ 3:29 ರಿಂದ ಮತ್ತೆ ಮರು ಆರಂಭ ಮಾಡಲಾಯಿತು. ಮೆಟ್ರೋ ಹಳಿಗಳ ಮೇಲೆ ಶಂಕಿತ ಡ್ರೋನ್ ಕಂಡು ಬರುತ್ತಿದ್ದಂತೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.
ಅಗತ್ಯ ಅನುಮತಿ ಪಡೆದ ನಂತರ ಸಿಐಎಸ್‌ಎಫ್ ಸಿಬ್ಬಂದಿ ಹಳಿಗಳ ಮೇಲೆ ಬಿದ್ದಿದ್ದ ಡ್ರೋನ್ ಹೊರತೆಗೆದರು. ಹಳಿಗಳ ಮೇಲೆ ಕಂಡು ಬಂದಿದ್ದ ಡ್ರೋನ್ ಸಣ್ಣ ಆಟಿಕೆ ಡ್ರೋನ್ ಎಂದು ತಿಳಿದು ಬಂದಿದೆ. ಡ್ರೋನ್‌ನಲ್ಲಿ ಅನುಮಾನಾಸ್ಪದ ಯಾವುದೇ ಅಂಶಗಳು ಕಂಡುಬಂದಿಲ್ಲ, ಡ್ರೋನ್ ಅನ್ನು ವಶಕ್ಕೆ ಪಡೆದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: ವಿವಾದಿತ ಹೇಳಿಕೆ ವಿಚಾರ: ನಟಿ ಸಮಂತಾ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಸಚಿವೆ ಕೊಂಡಾ ಸುರೇಖಾ