ಜಮ್ಮು: ಇಲ್ಲಿನ ಕಥುವಾದ ಶಿವ ನಗರದಲ್ಲಿ ಬುಧವಾರ ಬೆಳಗಿನ ಜಾವ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಮನೆಯವರೆಲ್ಲ ನಿದ್ರೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿ ಆರು ಜನರು ಸಾವನ್ನಪ್ಪಿದ್ದಾರೆ. ಇತರ ನಾಲ್ವರು ತೀವ್ರ ಅಸ್ವಸ್ಥರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಬಾಡಿಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಳಗಿನ ಜಾವ 2.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಮನೆಯತ್ತ ಧಾವಿಸಿದ್ದಾರೆ. ಬಳಿಕ ಮನೆಯಲ್ಲಿದ್ದವರನ್ನು ಕಥುವಾದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
"ಮನೆಯಲ್ಲಿದ್ದ 10 ಜನರಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ನಾಲ್ವರಿಗೆ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಕಥುವಾ ಸರ್ಕಾರಿ ವೈದ್ಯಕೀಯ ಕಾಲೇಜಿನ (ಜಿಎಂಸಿ) ಪ್ರಾಂಶುಪಾಲರಾದ ಡಾ. ಎಸ್‌ಕೆ ಅತ್ರಿ ತಿಳಿಸಿದ್ದಾರೆ.
ಮನೆಯಲ್ಲಿದ್ದವರು ಬೆಂಕಿಯಿಂದ ಹೊಗೆ ಆವರಿಸಿ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿರಬಹುದು ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಮನೆಯಲ್ಲಿನ ಬೆಡ್ ರೂಂ, ಸೋಫಾ ಸೇರಿದಂತೆ ಇತರ ವಸ್ತುಗಳು ಬೆಂಕಿಯಿಂದ ಸುಟ್ಟು ಕರಕಲಾಗಿವೆ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತಿದೆ.
ದುರಂತ ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಗಂಡು ಮಗುವಿಗಾಗಿ ಜೀವಂತ ಕೋಳಿ ನುಂಗಿ ಪ್ರಾಣ ಕಳೆದುಕೊಂಡ ವ್ಯಕ್ತಿ