ಚಂಡೀಗಢ: ಪಂಜಾಬ್ ಆಪ್ ಮತ್ತು ದೆಹಲಿ ಆಪ್ ನಾಯಕರ ನಡುವೆ ಬಿರುಕು ಉಂಟಾಗಿದೆ ಎಂಬ ಸುದ್ದಿಯ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ (ಮೇ 16) ಪಂಜಾಬ್ನಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಅಬಕಾರಿ ನೀತಿ ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಮಧ್ಯಂತರ ಜಾಮೀನು ಪಡೆದುಕೊಂಡ ಬಳಿಕ ಮೊದಲ ಮೊದಲ ಬಾರಿಗೆ ಪಂಜಾಬ್ಗೆ ಭೇಟಿ ನೀಡುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಅವರು ಮತಯಾಚನೆ ಮಾಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.
ಪಕ್ಷ ನೀಡಿದ ಮಾಹಿತಿಯ ಪ್ರಕಾರ, ದೆಹಲಿ ಸಿಎಂ ಕೇಜ್ರಿವಾಲ್ ಅವರು, ಅಮೃತಸರದಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಜೊತೆಗೆ ಸಚ್ಖಂಡ್ ದರ್ಬಾರ್ ಸಾಹಿಬ್‌ಗೆ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅರವಿಂದ್ ಕೇಜ್ರಿವಾಲ್ ಅವರು ಮೇ 16 ರಂದು ಸಂಜೆ 6 ಗಂಟೆಗೆ ಅಮೃತಸರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇದರ ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಇರಲಿದ್ದಾರೆ. ಅಮೃತಸರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕುಲದೀಪ್ ಸಿಂಗ್ ಧಲಿವಾಲ್ ಪರವಾಗಿ ಪ್ರಚಾರ ಮಾಡಲಿದ್ದಾರೆ. ಇದರ ನಂತರ, ಸಚ್ಖಂಡ್ ಶ್ರೀ ಹರಿಮಂದರ್ ಸಾಹಿಬ್‌ಗೆ ತಲುಪಲಿದ್ದಾರೆ ಎಂದು ಹೇಳಲಾಗಿದೆ.
ದೆಹಲಿ ಸಿಎಂ ವಿರುದ್ಧದ ಆರೋಪವೇನು?: ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪ ಮಾಡಿದೆ. ಪ್ರಕರಣದಲ್ಲಿ ಆಪ್ನ ಹಲವರನ್ನು ಬಂಧಿಸಿದೆ.
ಮಾರ್ಚ್ 21 ರಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನೂ ಇಡಿ ಬಂಧಿಸಿತ್ತು. ಇದಕ್ಕೂ ಮೊದಲು ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಈ ಯಾವುದೇ ನೋಟಿಸ್ಗೆ ದೆಹಲಿ ಸಿಎಂ ಕ್ಯಾರೇ ಎಂದಿರಲಿಲ್ಲ. ಬಂಧನದ ಬಳಿಕ ಅನುಪಸ್ಥಿತಿಯಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ತಮ್ಮ ಪಕ್ಷದ ಪರ ಪ್ರಚಾರ ನಡೆಸಿದ್ದರು.
20 ದಿನ ಜಾಮೀನು: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. 20 ದಿನದಲ್ಲಿ ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರ ಕೂಡ ನಡೆಸಬಹುದು ಎಂದು ಹೇಳಿದೆ. ಬಳಿಕ ದೆಹಲಿ ಮುಖ್ಯಮಂತ್ರಿ ಜೂನ್ 2 ರಂದು ಕೋರ್ಟ್ ಮುಂದೆ ಶರಣಾಗಬೇಕು ಎಂದು ತೀರ್ಪಿನಲ್ಲಿ ಹೇಳಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಲೋಕಸಭಾ ಸ್ಥಾನಗಳಿಗೆ ಮೇ 25 ರಂದು ಮತದಾನ ನಡೆಯಲಿದೆ. ಜೂನ್ 1ರ ವರೆಗೂ ದೇಶದಲ್ಲಿ 7 ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.