ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (EVM) ವಿಶ್ವಾಸಾರ್ಹತೆಯ ಮೇಲೆ ಪದೇ ಪದೇ ಪ್ರಶ್ನೆ ಎತ್ತುತ್ತಿರುವ ಕಾಂಗ್ರೆಸ್ ವಿರುದ್ಧ I.N.D.I.A ಕೂಟದ ಮಿತ್ರಪಕ್ಷಗಳೇ ತಿರುಗಿಬಿದ್ದಿವೆ. ಇವಿಎಂ ಮೇಲೆ ಅನುಮಾನವಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಎಂದು ಜಮ್ಮು- ಕಾಶ್ಮೀರದ ನ್ಯಾಷನಲ್ ಕಾನ್ಫ್ರೆನ್ಸ್ (ಎನ್ಸಿ) ಹೇಳಿದ ಬೆನ್ನಲ್ಲೇ, ಟಿಎಂಸಿ ಕೂಡ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದೆ.
ಇವಿಎಂ ಹ್ಯಾಕ್ ಮಾಡುವ ಬಗ್ಗೆ ಸಾಕ್ಷ್ಯಗಳಿದ್ದರೆ, ಅವುಗಳನ್ನು ಚುನಾವಣಾ ಆಯೋಗಕ್ಕೆ ನೀಡಿ ಆರೋಪ ಸಾಬೀತು ಮಾಡಿ. ಇಲ್ಲವಾದಲ್ಲಿ ಇವು ಕೇವಲ ಹತಾಶೆಯ ಹೇಳಿಕೆಗಳು ಅಷ್ಟೇ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಿಡಿಕಾರಿದೆ.
ಇವಿಎಂ ವಿರುದ್ಧದ ಆರೋಪಕ್ಕೆ ಪುರಾವೆಯೇನು?: ಟಿಎಂಸಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಕಾಂಗ್ರೆಸ್ ಆರೋಪಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, "ಇವಿಎಂ ಬಗ್ಗೆ ಪ್ರಶ್ನೆ ಎತ್ತುವವರು ತಮ್ಮ ಬಳಿ ಏನಾದರೂ ಪುರಾವೆಗಳು ಇದ್ದಲ್ಲಿ, ಚುನಾವಣಾ ಆಯೋಗಕ್ಕೆ ನೀಡಬೇಕು. ಇವಿಎಂ ಸರಿಯಾಗಿ ಕೆಲಸ ಮಾಡದಿದ್ದರೆ, ಅದನ್ನು ಸಾಕ್ಷ್ಯಸಮೇತ ಪತ್ತೆ ಮಾಡಿ. ಇದು ಬಿಟ್ಟು, ಬರಿಯ ಆರೋಪ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ" ಎಂದು ಹೇಳಿದ್ದಾರೆ.
"ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಯಾರಾದರೂ ಭಾವಿಸಿದರೆ, ಅದು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು. ಕೇವಲ ಆರೋಪಿತ ಹೇಳಿಕೆಗಳನ್ನು ನೀಡುವ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ" ಎಂದು ಟಿಎಂಸಿ ಸಂಸದ ಟೀಕಿಸಿದರು.
ಇದನ್ನೂ ಓದಿ: ಕಾಂಗ್ರೆಸ್ EVM ದೂಷಿಸುವುದನ್ನು ಬಿಟ್ಟು ಫಲಿತಾಂಶ ಒಪ್ಪಿಕೊಳ್ಳಲಿ: ಸಿಎಂ ಒಮರ್ ಅಬ್ದುಲ್ಲಾ
ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಮಹಾರಾಷ್ಟ್ರದ ಚುನಾವಣೆಯನ್ನು ಶಂಕಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
"ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೋಲ್ಮಾಲ್ ನಡೆದಿದೆ. ಇಡೀ ಚುನಾವಣಾ ಪ್ರಕ್ರಿಯೆಯೇ ಹ್ಯಾಕ್ ಆಗಿದೆ. ರಾಜ್ಯದ ಚುನಾವಣಾ ಫಲಿತಾಂಶವನ್ನು ಒಪ್ಪಲು ಅಸಾಧ್ಯ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ" ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದರು.
ಬಿಜೆಪಿ ತಿರುಗೇಟು: ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂಗಳಲ್ಲಿ ದೋಷವಿದೆ ಎಂದು ಆರೋಪ ಮಾಡುತ್ತದೆ. ಆ ಪಕ್ಷವು ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಇವಿಎಂ ಅನ್ನು ದೂಷಿಸುತ್ತದೆ. ಇಂತಹ ಆರೋಪಗಳಿಂದ ಆ ಪಕ್ಷವು ಯಾವುದೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕರ್ನಾಟಕ, ಜಾರ್ಖಂಡ್‌ನಲ್ಲಿ ಗೆದ್ದು ಸರ್ಕಾರ ರಚಿಸಿದಾಗ, ಇವಿಎಂಗಳಿಗೆ ಯಾವುದೇ ತೊಂದರೆ ಇರಲಿಲ್ಲವೇ ಎಂದು ಮರು ಪಶ್ನೆ ಮಾಡಿದೆ.
ಇದನ್ನೂ ಓದಿ: ಮಸೀದಿಯಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗುವುದು ಅಪರಾಧವೇ: ಸುಪ್ರೀಂಕೋರ್ಟ್ ಪ್ರಶ್ನೆ