ವೈಎಸ್‌ಆರ್ ಕಡಪ(ಆಂಧ್ರಪ್ರದೇಶ): ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಎಸ್‌ಆರ್ ಜಿಲ್ಲೆಯ ಕೊತ್ತ ಮಾಧವರಂನಲ್ಲಿ ನಡೆದಿದೆ. ಸುಬ್ಬರಾವ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅವರ ಪತ್ನಿ ಪದ್ಮಾವತಿ ಹಾಗೂ ಪುತ್ರಿ ವಿನಯ ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾರೆ. ಪತಿ ಸುಬ್ಬರಾವ್ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಲ್ಲಿ ಡೇತ್ ನೋಟ್ ಪತ್ತೆಯಾಗಿದ್ದು, ಮಾರಾಟ ಮಾಡಬೇಕು ಎಂದುಕೊಂಡಿದ್ದ ಮೂರು ಎಕರೆ ಜಮೀನಿನ ದಾಖಲೆಗಳನ್ನು ತಿರುಚಿದ್ದರಿಂದ ಮನನೊಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಕುಟುಂಬಸ್ಥರ ಮಾಹಿತಿ ಪ್ರಕಾರ, ಕೊತ್ತ ಮಾಧವರಂ ನಿವಾಸಿ ಪಾಲಾ ಸುಬ್ಬರಾವ್ (47) ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಹಿರಿಯ ಪುತ್ರಿ ಹೈದರಾಬಾದ್ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸುಬ್ಬರಾವ್ ತನ್ನ ಕಿರಿಯ ಪುತ್ರಿ ಹಾಗೂ ಪತ್ನಿಯೊಂದಿಗೆ ಕೊತ್ತ ಮಾಧವರಂನಲ್ಲಿ ವಾಸಿಸುತ್ತಿದ್ದಾರೆ. ಪಾಲಾ ಸುಬ್ಬರಾವ್ ಅವರು ಒಂಟಿಮಿಟ್ಟಾದ ಮಾಧವರಂನಲ್ಲಿ 3.10 ಎಕರೆ ಭೂಮಿ ಹೊಂದಿದ್ದಾರೆ. ಈ ಭೂಮಿಗೆ ಸಂಬಂಧಿಸಿದಂತೆ ಆಂಧ್ರ ಸರ್ಕಾರದ ರೈತ ಭರೋಸ ಯೋಜನೆಯ ಹಣ ಸುಬ್ಬರಾವ್ ಅವರ ಖಾತೆಗೆ ಜಮಾಯಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಕಂದಾಯ ಅಧಿಕಾರಿಗಳು ಸುಬ್ಬರಾವ್ ಹೆಸರಿನಲ್ಲಿದ್ದ ಜಮೀನನ್ನು ಶ್ರಾವಣಿ ಎಂಬ ಮಹಿಳೆಯ ಹೆಸರಿಗೆ ಆನ್ಲೈನ್ ನಲ್ಲಿ ವರ್ಗಾಯಿಸಿದ್ದರು. ಸುಬ್ಬರಾವ್ ಅವರು ಮತ್ತೆ ಜಮೀನನ್ನನ್ನು ತನ್ನ ಹೆಸರಿಗೆ ಮಾಡಿಸಿಕೊಳ್ಳಲು ಕಂದಾಯ ಅಧಿಕಾರಿಗಳ ಮೊರೆ ಹೋಗಿ, ಅವರಿಗೆ ಲಂಚ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಹೇಳಿದ್ದಾರೆ.
ಡೇತ್ ನೋಟ್ನಲ್ಲಿ ಏನೀದೆ?: ಭೂಮಿ ಮಾರಾಟ ಮಾಡಿ ತಮ್ಮ ಮಕ್ಕಳ ಮದುವೆ ಮತ್ತು ಸಾಲ ತೀರಿಸಲು ಬಯಸಿದ್ದೆ, ಆದರೆ, ಕಂದಾಯ ಅಧಿಕಾರಿಗಳು ತಮ್ಮ ಜಮೀನನ್ನನ್ನು ಬೇರೊಬ್ಬರ ಹೆಸರಿಗೆ ಬದಲಾಯಿಸಿದ್ದಾರೆ. ಎಂಆರ್ಒಗೆ ಲಂಚ ನೀಡಲು ನಮ್ಮ ಬಳಿ ಹಣವಿಲ್ಲ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೇತ್ ನೋಟ್ನಲ್ಲಿ ಬರೆಯಲಾಗಿದೆ.
ಆದರೆ, ಪತ್ನಿ ಮತ್ತು ಪುತ್ರಿಯ ಕುತ್ತಿಗೆಯ ಕೆಳಗೆ ಹಗ್ಗದಿಂದ ಬಿಗಿದಿರುವ ಗುರುತುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪತಿ ಸುಬ್ಬರಾವ್ ಬೇರೆ ಕಡೆಗೆ ಹೋಗಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂಟಿಮಿಟ್ಟ ಠಾಣೆಯ ಸಿಐ ಪುರುಷೋತ್ತಮ ರಾಜು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.