ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ಹಲವು ಸಚಿವಾಲಯಗಳನ್ನು ಹೊಂದಿರುವ ನಾರ್ತ್ ಬ್ಲಾಕ್‌ಗೆ ಬುಧವಾರ ಮಧ್ಯಾಹ್ನ ಬಾಂಬ್ ಬೆದರಿಕೆ ಬಂದಿದೆ. ತಕ್ಷಣವೇ ಪೊಲೀಸ್ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ, ಆವರಣದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಮಧ್ಯಾಹ್ನ ನಾರ್ತ್ ಬ್ಲಾಕ್‌ಗೆ ಬಾಂಬ್ ಬೆದರಿಕೆ ಬಗ್ಗೆ ಇಮೇಲ್ ಸಂದೇಶ ಬಂದಿದೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 3:37ಕ್ಕೆ ಪೊಲೀಸರಿಂದ ಕರೆ ಸ್ವೀಕರಿಸಲಾಗಿದೆ. ಇದರಿಂದ ಎರಡು ಅಗ್ನಿಶಾಮಕ ದಳದ ವಾಹನಗಳು ಹಾಗೂ ಶ್ವಾನ ದಳದೊಂದಿಗೆ ಬಾಂಬ್ ನಿಷ್ಕ್ರಿಯ ದಳದ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚೆಗೆ ದೆಹಲಿಯ ಹಲವಾರು ಆಸ್ಪತ್ರೆಗಳು, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತಿಹಾರ್ ಜೈಲುಗಳ ಆವರಣದಲ್ಲಿ ಸ್ಫೋಟಕಗಳು ಇವೆ ಎಂದು ಬಾಂಬ್ ಬೆದರಿಕೆ ಬಗ್ಗೆ ಇಮೇಲ್ ಸಂದೇಶಗಳು ಬಂದಿದ್ದವು. ಆದರೆ, ದೆಹಲಿ ಪೊಲೀಸರು ತನಿಖೆ ನಡೆಸಿ, ಇವು ಹುಸಿ ಬೆದರಿಕೆಗಳು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಸುಮಾರು 20 ದಿನಗಳ ಹಿಂದೆ ದೆಹಲಿ-ಎನ್‌ಸಿಆರ್‌ನಾದ್ಯಂತ 150ಕ್ಕೂ ಹೆಚ್ಚು ಶಾಲೆಗಳಿಗೂ ಇದೇ ರೀತಿಯಾಗಿ ಬೆದರಿಕೆ ಇಮೇಲ್‌ಗಳು ಬಂದಿದ್ದವು. (IANS)
ಇದನ್ನೂ ಓದಿ: ಬೆಂಗಳೂರು, ದೆಹಲಿ, ಜೈಪುರದ ನಂತರ ಕಾನ್ಪುರದ ಶಾಲೆಗಳಿಗೂ ಬಾಂಬ್ ಬೆದರಿಕೆ ಇಮೇಲ್ ಸಂದೇಶ