ತಮಿಳುನಾಡು: ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಓಷಿಯನ್ ಟೆಕ್ನಾಲಜಿ (NIOT) ವಿಜ್ಞಾನಿಗಳ ತಂಡವು ಆಳ ಸಮುದ್ರದಲ್ಲಿ ಡೈವಿಂಗ್ ಮಾಡುವ ಮೂಲಕ ಹಾಗೂ ಸೋನಾರ್ ಸಂಕೇತಗಳೊಂದಿಗೆ ಬಂಗಾಳಕೊಲ್ಲಿಯಲ್ಲಿ ಕಣ್ಮರೆಯಾಗಿದ್ದ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಏಳು ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ ವಿಮಾನವು ನಿಗೂಢವಾಗಿ ಕಣ್ಮರೆಯಾಗಿತ್ತು. ಇದನ್ನು ಕಂಡುಹಿಡಿಯುವ ಉದ್ದೇಶದಿಂದಲೇ ಈ ತಂಡವನ್ನು ನಿಯೋಜಿಸಲಾಗಿತ್ತು.
ಇದ್ದಕ್ಕಿದ್ದಂತೆ ವಿಮಾನ ಕಣ್ಮರೆ!: ಜುಲೈ 22, 2016ರಂದು 29 ರಕ್ಷಣಾ ಸಿಬ್ಬಂದಿಯನ್ನು ಹೊತ್ತ ಆಂಟೊನೊವ್-32 ವಿಮಾನ ಬಂಗಾಳ ಕೊಲ್ಲಿ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದಾಗ ದಿಢೀರ್ ಕಣ್ಮರೆಯಾಗಿತ್ತು. ಹೀಗೆ ಕಾಣೆಯಾಗಿದ್ದ ವಿಮಾನವು ಚೆನ್ನೈನ ತಾಂಬರಂ ಏರ್‌ಫೋರ್ಸ್ ಸ್ಟೇಷನ್‌ನಿಂದ ಅಂದು ಬೆಳಿಗ್ಗೆ 8.30ರ ಸುಮಾರಿಗೆ ಟೇಕ್ ಆಫ್ ಆಗಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಪೋರ್ಟ್ ಬ್ಲೇರ್‌ಗೆ ಬೆಳಿಗ್ಗೆ 11:45ಕ್ಕೆ ಆಗಮಿಸಬೇಕಿತ್ತು. ಆದರೆ, ನಿಗದಿತ ಸ್ಥಳವನ್ನು ವಿಮಾನ ತಲುಪಲೇ ಇಲ್ಲ. ಚೆನ್ನೈನಿಂದ ಸರಿಸುಮಾರು 280 ಕಿಲೋಮೀಟರ್ ದೂರದಲ್ಲಿದ್ದಾಗ ವಾಯುಸೇನೆಯ AN32 ವಿಮಾನ ಬೆಳಿಗ್ಗೆ 9.15 ರ ಸುಮಾರಿಗೆ ತನ್ನ ಸಂಪರ್ಕ ಕಳೆದುಕೊಂಡು ಕಣ್ಮರೆಯಾಗಿತ್ತು. ಆರು ಸಿಬ್ಬಂದಿ ಮತ್ತು 11 ಸಹಸಿಬ್ಬಂದಿ, ಇಬ್ಬರು ಸೈನಿಕರು, ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆಯಿಂದ ತಲಾ ಒಬ್ಬರು ಮತ್ತು ನೌಕಾಪಡೆಗಾಗಿ ಕೆಲಸ ಮಾಡುವ ಎಂಟು ನಾಗರಿಕರು ವಿಮಾನದಲ್ಲಿದ್ದರು.
ಕೊನೆಗೂ ಅವಶೇಷ ಪತ್ತೆ: ವಿಮಾನದ ಪತ್ತೆಗೆ ನೌಕಾಪಡೆಗಳು ಸತತ ಪರಿಶ್ರಮ ಹಾಕಿದ್ದವು. ಇದೀಗ ಏಳು ವರ್ಷಗಳ ಬಳಿಕ ಪತ್ತೆಯಾಗಿದೆ. ಇದಕ್ಕಾಗಿ ಸೌಂಡ್ ನ್ಯಾವಿಗೇಷನ್ ಮತ್ತು ರೇಂಜಿಂಗ್ ಸೇರಿದಂತೆ ಸಮುದ್ರದಾಳದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಎಯುವಿ ವಾಹನವನ್ನು ಅವಘಡ ಸಂಭವಿಸಿದ್ದ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಎಯುವಿ ವಾಹನ 3.1 ಕಿ.ಮೀ. ಆಳದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದೆ. ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದ ವಿಡಿಯೋಗಳು 'ಈಟಿವಿ ಭಾರತ'ಕ್ಕೆ ದೊರೆತಿವೆ. ಈ ಎಯುವಿ ವಾಹನವು 6.6 ಮೀಟರ್ ಉದ್ದ, 0.875 ಮೀಟರ್ ವ್ಯಾಸ ಮತ್ತು 2.1 ಟನ್ ತೂಕ ಹೊಂದಿದೆ.
ವಿಶೇಷ ವಾಹನ ನೀರಿನಾಳದಲ್ಲಿ ಸೂಕ್ಷ್ಮ ಕಾರ್ಯಾಚರಣೆ ನಡೆಸಿ, An-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ನಿರ್ಣಾಯಕ ಕೆಲಸ ಮಾಡಿದೆ. ನೀರೊಳಗೆ ಸದ್ದಿಲ್ಲದೇ ನಿಖರವಾಗಿ ಕಾರ್ಯಾಚರಣೆ ಮಾಡುವ ಈ ವಾಹನವು 3,400 ಮೀಟರ್ ಆಳದಲ್ಲಿ 30 ಗಂಟೆಗಳ ಡೈವ್ ಮಾಡಿ ಅವಶೇಷಗಳನ್ನು ಕಂಡುಹಿಡಿದಿದೆ. ಅವಶೇಷಗಳು ಸಿಕ್ಕ ಜಾಗವು ಚೆನ್ನೈ ಕರಾವಳಿಯಿಂದ ಸರಿಸುಮಾರು 140 ನಾಟಿಕಲ್ ಮೈಲುಗಳು/310 ಕಿ.ಮೀ ದೂರದಲ್ಲಿದೆ. ವಿಶೇಷವೆಂದರೆ, ಐಎಎಫ್ ವಿಮಾನ ಕಣ್ಮರೆಯಾದ ಹಾಗೂ ಏರ್ ಟ್ರಾಫಿಕ್ ರಾಡಾರ್ ವ್ಯವಸ್ಥೆಯಿಂದ ಕಣ್ಮರೆಯಾದ ಕೊನೆಯ ಗಳಿಗೆ ಎಂಬುದು ಗಮನಾರ್ಹ.
ವಿಜ್ಞಾನಿಗಳ ಪ್ರತಿಕ್ರಿಯೆ: ''ಸಾಗರದಡಿಯಲ್ಲಿ ಲಭ್ಯವಿರುವ ಖನಿಜಗಳ ಪರಿಶೋಧನೆಗಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಭಾಗವಾಗಿ NIOT ಸ್ವಾಯತ್ತ ನೀರೊಳಗಿನ ವಾಹನವನ್ನು ಅಭಿವೃದ್ಧಿಪಡಿಸಿದೆ. ಇದು 6,000 ಮೀಟರ್ ಆಳಕ್ಕಿಳಿದು ನಿಗದಿತ ವಸ್ತುಗಳನ್ನು ಪತ್ತೆ ಹಚ್ಚಲು ಸಮರ್ಥವಾಗಿದೆ. UAV ವಾಹನವು ಬಂಗಾಳಕೊಲ್ಲಿಯಲ್ಲಿ 3,400 ಮೀಟರ್ ಆಳದಲ್ಲಿ ಕೆಲವು ವಸ್ತುಗಳಿರುವ ಬಗ್ಗೆ ಚಿತ್ರಸಮೇತ ಡೇಟಾ ಸೆರೆಹಿಡಿದಿದೆ. ಸೋನಾರ್‌ನ ಚಿತ್ರಗಳನ್ನು ವಿಶ್ಲೇಷಿಸಿದ ನಂತರ ಅವು ಲೋಹೀಯ ವಸ್ತುಗಳೆಂದು ನಮಗೆ ತಿಳಿದುಬಂತು. ಅವು 2016ರಲ್ಲಿ ಕಣ್ಮರೆಯಾದ ವಿಮಾನದ ಭಾಗಗಳಾಗಿವೆ" ಎಂದು ಎನ್ಐಒಟಿ ವಿಜ್ಞಾನಿ ಎನ್.ಆರ್.ರಮೇಶ್ ಮಾಹಿತಿ ನೀಡಿದರು.
''ನಾವೀಗ ಅವಶೇಷಗಳನ್ನು ಪತ್ತೆಹಚ್ಚಿದ AUV ವಾಹನವನ್ನು ನಮ್ಮ ಸುಪರ್ದಿಗೆ ತೆಗೆದುಕೊಂಡಿದ್ದೇವೆ. ಇದು ಹೆಚ್ಚಿನ ರೆಸಲ್ಯೂಶನ್ ಮ್ಯಾಪಿಂಗ್ ಪೇಲೋಡ್‌ಗಳನ್ನು ಹೊಂದಿದೆ. ನಾವು 3,400 ಮೀಟರ್‌ಗಳಷ್ಟು ಆಳಕ್ಕೆ ಹೋಗಿ ದೊಡ್ಡ ಪ್ರದೇಶದ ಸಮೀಕ್ಷೆ ಮಾಡಲು ಮತ್ತು ಕೆಲವು ಮಾನವ ನಿರ್ಮಿತ ವಸ್ತುಗಳನ್ನು ವಶಕ್ಕೆ ಪಡೆಯಲು ಸಾಧ್ಯವಾಯಿತು. ಇವು IAFನ AN32 ಅವಶೇಷಗಳಾಗಿವೆ" ಎಂದು ರಮೇಶ್ ತಿಳಿಸಿದರು.
''NIOT ಜೀವಂತ ಮತ್ತು ನಿರ್ಜೀವ ಎರಡೂ ಸಾಗರ ಸಂಪನ್ಮೂಲಗಳ ಪರಿಶೋಧನೆ ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದೆ. ನಿರ್ಜೀವ ಸಂಪನ್ಮೂಲಗಳ ಪರಿಶೋಧನೆಯ ಭಾಗವಾಗಿ, ನಾವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. 5,000 ಮೀ ನೀರಿನ ಆಳದಲ್ಲಿ NIOT ಮಾನವರಹಿತ ಹಡಗುಗಳಿಂದ ಕಾರ್ಯನಿರ್ವಹಿಸುವ ವಾಹನಗಳನ್ನು ಅಭಿವೃದ್ಧಿಪಡಿಸಿದೆ. ಈಗ, NIOT 3 ಜನರನ್ನು 6 ಕಿಮೀ ಆಳಕ್ಕೆ ಕರೆದೊಯ್ಯುವ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ'' ಎಂದು ಎನ್ಐಒಟಿ ನಿರ್ದೇಶಕ ಎ.ರಾಮದಾಸ್ ವಿವರಿಸಿದರು.
ವಿಮಾನ ಕಣ್ಮರೆ ಆದಂದಿನಿಂದ ಭಾರತೀಯ ವಾಯುಪಡೆ ಒಟ್ಟಾರೆ 2,17,800 ಚದರ ನಾಟಿಕಲ್ ಮೈಲುಗಳಷ್ಟು ಪ್ರದೇಶದಲ್ಲಿ ವಿಮಾನದ ಪತ್ತೆಗೆ ಹಗಲಿರುಳು ಶ್ರಮಿಸುತ್ತಿತ್ತು. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ಹಡಗುಗಳು ಸಮುದ್ರದ ಸುಮಾರು 28,000 ಚದರ ನಾಟಿಕಲ್ ಮೈಲುಗಳಲ್ಲಿ ಗಸ್ತು ಹಾಕಿದ್ದವು. ಜುಲೈನಲ್ಲಿ ಆರಂಭವಾಗಿದ್ದ ಹುಡುಕಾಟ ಸೆಪ್ಟೆಂಬರ್ 16, 2016ರವರೆಗೂ ಮುಂದುವರೆದಿತ್ತು. ಅಂತಿಮವಾಗಿ ಕಣ್ಮರೆಯಾದ ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿತ್ತು. ಇದೀಗ ಓಷನ್ ಮಿನರಲ್ ಎಕ್ಸ್‌ಪ್ಲೋರರ್ 6,000 ಎಂದು ಕರೆಯಲ್ಪಡುವ ನೀರೊಳಗಿನ ವಾಹನವು ಅವಶೇಷಗಳನ್ನು ಗುರುತಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ. ಅಷ್ಟೇ ಅಲ್ಲ, ತಾನು ಪತ್ತೆ ಹಚ್ಚಿದ ಅವಶೇಷಗಳು ಐಎಎಫ್ ವಿಮಾನದ್ದೇ ಎಂದು ದೃಢೀಕರಿಸಿದೆ. ಈ ಮೂಲಕ ಹುಡುಕಾಡಿ ಹುಡುಕಾಡಿ ಸುಸ್ತಾಗಿದ್ದ ವಾಯುಪಡೆ, ನೌಕಾಪಡೆಗಳಿಗೆ ಐಎಎಫ್ ವಿಮಾನದ ಅವಶೇಷಗಳನ್ನು ಪತ್ತೆಹಚ್ಚಿ ಕೊಡುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ; ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಪ್ರಧಾನಿಯಿಂದ ಹೊಸ ಘೋಷಣೆ