ಥಾಣೆ (ಮಹಾರಾಷ್ಟ್ರ): ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಸರ್ಕಾರದ ಕೆಲವು ನಿರ್ಧಾರಗಳಿಂದ ಸ್ಟಾಕ್ ಮಾರ್ಕೆಟ್ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಹಣದ ಲಾಭಕ್ಕೆ ಆಸೆ ಬಿದ್ದು ಕಳ್ಳರ ಕೈಗೆ ಸಿಲುಕಿ ಭಾರೀ ನಷ್ಟಕ್ಕೀಡಾದ ಹಲವು ಪ್ರಕರಣಗಳು ನಡೆದಿವೆ. ಇಂಥದ್ದೇ ಮತ್ತೊಂದು ಪ್ರಕರಣ ಮಹಾರಾಷ್ಟ್ರದಿಂದ ವರದಿಯಾಗಿದೆ.
ಥಾಣೆ ನಗರದ 65 ವರ್ಷದ ವ್ಯಕ್ತಿಯೊಬ್ಬರು ಈಕ್ವಿಟಿ ಹೂಡಿಕೆಯಲ್ಲಿ ಉತ್ತಮ ಆದಾಯದ ಆಮಿಷಕ್ಕೆ ಒಳಗಾಗಿ ಸುಮಾರು 46 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭ ಕೊಡಿಸುವುದಾಗಿ ನಾಲ್ವರು ಖದೀಮರು ಹೇಳಿದ ಮರಳು ಮಾತಿಗೆ ಒಳಗಾಗಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ.
ಥಾಣೆ ನಗರದ ಚರೈ ಪ್ರದೇಶದ ನಿವಾಸಿಯಾಗಿರುವ ದೂರುದಾರರು ನಿವೃತ್ತ ಉದ್ಯೋಗಿಯಾಗಿದ್ದಾರೆ. ವಂಚಕರು ತಮ್ಮನ್ನು ಪ್ರತಿಷ್ಠಿತ ಹಣಕಾಸು ಹೂಡಿಕೆ ಸಂಸ್ಥೆಯ ಉದ್ಯೋಗಿಗಳೆಂದು ಗುರುತಿಸಿಕೊಂಡಿದ್ದಾರೆ. ಷೇರುಗಳ ಮೇಲೆ ಲಾಭದಾಯಕ ಆದಾಯವನ್ನು ಕೊಡಿಸುವುದಾಗಿ ನಂಬಿಸಿದ್ದಾರೆ. ಇದು ನಿಜವೆಂದುಕೊಂಡ ಹಣ ಕಳೆದುಕೊಂಡ ವ್ಯಕ್ತಿ ಜೂನ್ 14 ರಿಂದ ಜುಲೈ 1 ರ ನಡುವೆ ಹಂತ ಹಂತವಾಗಿ 46 ಲಕ್ಷ ರೂಪಾಯಿಗಳನ್ನು ವಂಚಕರು ಹೇಳಿದಂತೆ ಪಾವತಿ ಮಾಡಿದ್ದಾರೆ.
ತಾವು ಹೂಡಿದ ಹಣಕ್ಕೆ ರಿಟರ್ನ್ಸ್ ಕೊಡದಿದ್ದಾಗ, ವಂಚಕರನ್ನು ಪ್ರಶ್ನಿಸಲಾಗಿದೆ. ಆಗ ವಂಚಕರ ಕೈಯಲ್ಲಿ ತಾವು ಮೋಸ ಹೋಗಿದ್ದಾಗಿ ಸಂತ್ರಸ್ತರು ಅರಿತುಕೊಂಡಿದ್ದಾರೆ. ತಕ್ಷಣವೇ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಐಟಿ ಕಾಯ್ದೆಯ ಸೆಕ್ಷನ್ 318 (4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಂಚನೆಗೆ ಬಳಸಿದ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ನಾಲ್ವರ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಆನ್ಲೈನ್ ಷೇರು ಮಾರುಕಟ್ಟೆ ಹೂಡಿಕೆ ಆಮಿಷ: ಮಂಗಳೂರಿನ ವ್ಯಕ್ತಿಗೆ 1.50 ಕೋಟಿ ವಂಚನೆ - Online Stock Market Fraud