ಮುಂಬೈ( ಮಹಾರಾಷ್ಟ್ರ): ಎಂಎನ್‌ಎಸ್(ಮಹಾರಾಷ್ಟ್ರ ನವನಿರ್ಮಾಣ ಸೇನೆ) ಅಧ್ಯಕ್ಷ ರಾಜ್ ಠಾಕ್ರೆ ಎನ್‌ಡಿಎ ಸೇರುವ ಸಂಬಂಧ ಚರ್ಚೆ ನಡೆಸಿರುವ ಬೆನ್ನಲ್ಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ರಾಜ್ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಮುಂಬೈನಿಂದ ಸ್ಪರ್ಧಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಅವರು ಸ್ಪರ್ಧಿಸಿದರೆ, ಠಾಕ್ರೆ ಕುಟುಂಬದ ಮೊತ್ತಂದು ಕುಡಿ ರಾಜಕೀಯ ಪ್ರವೇಶಿಸಿದಂತಾಗುತ್ತದೆ. ಈ ಹಿಂದೆ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಚಿವ ಸ್ಥಾನ ಅಲಂಕರಿಸಿದ್ದರು.
ಎಂಎನ್‌ಎಸ್ ಪಕ್ಷದಿಂದ ಬಾಳಾ ನಂದಗಾಂವ್ಕರ್ ದಕ್ಷಿಣ ಮುಂಬೈನಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ರಾಜ್ಠಾಕ್ರೆ ಅವರ ದೆಹಲಿ ಭೇಟಿಯ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಅಮಿತ್ ಠಾಕ್ರೆ ದಕ್ಷಿಣ ಮುಂಬೈನಿಂದ ಉಮೇದುವಾರಿಕೆ ಪಡೆಯುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಠಾಕ್ರೆ ಸ್ಪರ್ಧಿಸಿದರೆ, ಆದಿತ್ಯ ಠಾಕ್ರೆ ನಂತರ ಚುನಾವಣೆಗೆ ಎಂಟ್ರಿಕೊಟ್ಟ ಠಾಕ್ರೆ ಕುಟುಂಬದ ಮೂರನೇ ತಲೆಮಾರಿನ ಎರಡನೇ ಕುಡಿಯಾಗಲಿದ್ದಾರೆ.
ಯಾವುದೇ ಜವಾಬ್ದಾರಿ ನೀಡಿದರೂ ಯಶಸ್ವಿಯಾಗಿ ನಿರ್ವಹಿಸುತ್ತೇನೆ: ಈ ಹಿಂದೆ ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಅವರು ಚುನಾವಣೆಗೆ ಸ್ಪರ್ಧಿಸಲು ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಅಮಿತ್ ಠಾಕ್ರೆ ಅವರು ತನಗೆ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ಕಾರ್ಪೊರೇಟರ್, ಸರಪಂಚ್ ಜವಾಬ್ದಾರಿ ನೀಡಿದರೂ ಅದನ್ನು ಸರಿಯಾಗಿ ನಿರ್ವಹಿಸುತ್ತೇನೆ ಎಂದು ಪುಣೆ ಭೇಟಿ ವೇಳೆ ಹೇಳಿದ್ದಾರೆ. ಹಿಂದೆ, ಎಂಎನ್‌ಎಸ್ 13 ಶಾಸಕರನ್ನು ಹೊಂದಿತ್ತು ಮತ್ತು ಪಕ್ಷಕ್ಕೆ ನಾಸಿಕ್ ಭದ್ರಕೋಟೆಯಾಗಿತ್ತು. ಸದ್ಯ ಎಂಎನ್‌ಎಸ್‌ಗೆ ರಾಜಕೀಯ ಸವಾಲುಗಳು ಹೆಚ್ಚಿವೆ. ಈ ಹಿನ್ನೆಲೆ ರಾಜ್ಯದ ಮುಖ್ಯ ಪದಾಧಿಕಾರಿಗಳ ಜೊತೆ ಮಹಾಸಂಪರ್ಕ ಅಭಿಯಾನದ ಸಭೆಗಳನ್ನು ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಗರಿಷ್ಠ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ. ದಕ್ಷಿಣ ಮುಂಬೈ ಶಿವಸೇನೆಯ ಭದ್ರಕೋಟೆಯಾಗಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಅರವಿಂದ್ ಸಾವಂತ್ ಪ್ರಸ್ತುತ ಸಂಸದರಾಗಿದ್ದಾರೆ. ಅರವಿಂದ್ ಸಾವಂತ್ ಮತ್ತೆ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆ. ಉದ್ಧವ್ ಠಾಕ್ರೆ ಗುಂಪಿನ ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಯತ್ನಿಸುತ್ತಿದೆ.
ಇತ್ತೀಚೆಗಷ್ಟೇ ಎಂಎನ್‌ಎಸ್ ಮುಖಂಡ ಬಾಳಾ ನಂದಗಾಂವ್ಕರ್, "ದಕ್ಷಿಣ ಮುಂಬೈ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ಸಿದ್ಧನಿದ್ದೇನೆ. ನಾವು ಇಂಜಿನ್ ಚಿಹ್ನೆಯ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ಎನ್ಡಿಎಯಿಂದ ಹೊರಬಂದ ಆರ್ಎಲ್ಜೆಪಿ: ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ಪಾರಸ್ ರಾಜೀನಾಮೆ