ಹೈದರಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ಹೆಚ್ಚುತ್ತಿರುವ ಬೇಸಿಗೆ ಜೊತೆಗೆ ಬಿಸಿಗಾಳಿ ಪರಿಸ್ಥಿತಿ ಮುಂದುವರಿದಿದೆ. ನಲ್ಗೊಂಡ ಜಿಲ್ಲೆಯ ಇಬ್ರಾಹಿಂ ಪೇಟಾ ಪ್ರದೇಶದಲ್ಲಿ ಗುರುವಾರ ಗರಿಷ್ಠ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರ ನಡುವೆ ಮಳೆಯ ಮುನ್ಸೂಚನೆಯೂ ಸಿಕ್ಕಿದ್ದು, ಜನರಲ್ಲಿ ಕೊಂಚ ನೆಮ್ಮದಿ ತರುವಂತೆ ಮಾಡಿದೆ.
ದೇಶದ ಅನೇಕ ರಾಜ್ಯಗಳಲ್ಲಿ ಈ ವರ್ಷ ಬಿಸಿಲಿನ ಧಗೆ ಹೆಚ್ಚಾಗಿದೆ. ತೆಲಂಗಾಣದಲ್ಲೂ ಸತತ 7ನೇ ದಿನ ಬಿಸಿಗಾಳಿ ಬೀಸಿದೆ. ಹೀಗಾಗಿ ಜನತೆ ಎದುರುಸಿರುವ ಬಿಡುವಂತೆ ಮಾಡಿದೆ. ಇದೀಗ ಏಪ್ರಿಲ್ 7 ರಿಂದ ಏಪ್ರಿಲ್ 9ರವರೆಗೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಹಗುರವಾದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರೊಂದಿಗೆ ಪೂರ್ವ ಮುಂಗಾರು ಮಳೆಯತ್ತ ಆಶಾದಾಯಕವಾಗಿ ನೋಡುವಂತೆ ಮಾಡಿದೆ.
ಈಗಾಗಲೇ ಹವಾಮಾನ ಇಲಾಖೆಯು ಬಿಸಿಗಾಳಿಯಂತಹ ಪರಿಸ್ಥಿತಿಗಳ ಬಗ್ಗೆ ಎಚ್ಚರಿಕೆ ನೀಡಿದೆ. ಜನರು ಸರಿಯಾದ ಮುನ್ನೆಚ್ಚರಿಕೆ ವಹಿಸಲು ಕೂಡ ಸಲಹೆ ನೀಡಲಾಗಿದೆ. ಶುಕ್ರವಾರದ ಮುನ್ಸೂಚನೆಯಂತೆ ತೆಲಂಗಾಣದ ಭದಾದ್ರಿ, ಕೊತಗುಡೆಂ, ಖಮ್ಮಂ, ನಲ್ಗೊಂಡ, ಸೂರ್ಯಪೇಟ್, ಮಹಬೂಬ್‌ನಗರ ಮತ್ತು ನಾಗರ್ಕರ್ನೂಲ್ ಜಿಲ್ಲೆಗಳ ವಿವಿಧೆಡೆ ಬಿಸಿಲಿನ ಅಲೆಗಳು ಬೀಸುವ ಸಾಧ್ಯತೆ ಇದೆ.
ಈಗಾಗಲೇ ರಾಜ್ಯದಲ್ಲಿ ಏಪ್ರಿಲ್ನಿಂದ ಜೂನ್ವರೆಗೆ ಹೆಚ್ಚಿನ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದರ ಗಂಭೀರ ಪರಿಣಾಮವನ್ನು ಪರಿಗಣಿಸಿ ಸರ್ಕಾರವು ಈಗಾಗಲೇ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುವಂತೆ ಎಲ್ಲ ವಿದ್ಯುತ್ ಸ್ಥಾವರಗಳನ್ನು ಸಜ್ಜುಗೊಳಿಸಿದೆ. ನಿರ್ವಹಣೆ ಅಥವಾ ಇತರ ಕಾರಣಗಳಿಗಾಗಿ ಮುಚ್ಚಿರುವ ಎಲ್ಲ ಸ್ಥಾವರಗಳನ್ನು ತ್ವರಿತವಾಗಿ ಕಾರ್ಯಾಚರಣೆ ಪ್ರಾರಂಭಿಸಲು ಮತ್ತು ನಿರ್ದಿಷ್ಟ ಬಳಕೆದಾರರಿಗೆ ಮೀಸಲಾಗಿರುವ ಉತ್ಪಾದನಾ ಕೇಂದ್ರಗಳಲ್ಲಿ ಲಭ್ಯವಿರುವ ಹೆಚ್ಚುವರಿ ವಿದ್ಯುತ್ ಅನ್ನು ಬಳಸಿಕೊಳ್ಳುವಂತೆಯೂ ಸರ್ಕಾರ ಸೂಚಿಸಿದೆ.
ವಿದ್ಯುತ್ ಸಚಿವಾಲಯವು ಈ ಬೇಸಿಗೆಯಲ್ಲಿ (ಏಪ್ರಿಲ್-ಜೂನ್) 260 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಅಂದಾಜು ಮಾಡಿದೆ. ಇದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿನ ಅತ್ಯಧಿಕ 243 ಗಿಗಾವ್ಯಾಟ್ ಬೇಡಿಕೆ ಉಂಟಾಗಿತ್ತು. ಕಳೆದ ವರ್ಷ 229 ಗಿಗಾವ್ಯಾಟ್ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ನಿರೀಕ್ಷಿಸಿತ್ತು. ಆದರೆ, ಅಕಾಲಿಕ ಮಳೆಯಿಂದಾಗಿ ಸೆಪ್ಟೆಂಬರ್ನಲ್ಲಿ ಸಾರ್ವಕಾಲಿಕ 243 ಗಿಗಾವ್ಯಾಟ್ ವಿದ್ಯುತ್ ಬಳಕೆಯಾಗಿತ್ತು.