ನವದೆಹಲಿ : ಕರ್ನಾಟಕ ಮತ್ತು ತೆಲಂಗಾಣದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪಕ್ಷದ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದಾರೆ.
ಜೂನ್ 4ರ ಫಲಿತಾಂಶಕ್ಕೂ ಮೊದಲು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ತಮ್ಮ ರಾಜ್ಯದಲ್ಲಿನ ಪಕ್ಷದ ಸಾಧನೆ ಮತ್ತು ಏನು ಫಲಿತಾಂಶ ಬರಬಹುದು ಎಂಬ ವರದಿಯನ್ನು ನೀಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಮೇ 28 ರಂದೇ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಪಕ್ಷದ ಸಾಧನೆ ಮತ್ತು ಪ್ರಯತ್ನದ ಬಗ್ಗೆ ಅಂಕಿ- ಅಂಶಗಳನ್ನು ನೀಡಿದ್ದಾರೆ.
2023 ರಲ್ಲಿ ತೆಲಂಗಾಣ ಮತ್ತು ಕರ್ನಾಟಕ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದು ಕೇಂದ್ರ ನಾಯಕತ್ವದ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಎರಡು ರಾಜ್ಯಗಳು ದಕ್ಷಿಣ ಭಾರತದಿಂದ ಪಕ್ಷದ ಒಟ್ಟಾರೆ ಲೆಕ್ಕಾಚಾರಕ್ಕೆ ಸಮೃದ್ಧವಾದ ಕೊಡುಗೆ ನೀಡಿವೆ. ಲೋಕಸಭೆ ಚುನಾವಣೆಗೆ ಮುನ್ನ ಇಬ್ಬರೂ ಮುಖ್ಯಮಂತ್ರಿಗಳು ಯೋಗ್ಯವಾದ ಲೋಕಸಭಾ ಸ್ಥಾನಗಳ ಗೆಲ್ಲುವ ಕುರಿತು ಹೈಕಮಾಂಡ್‌ಗೆ ಭರವಸೆ ನೀಡಿದ್ದಾರೆ ಮತ್ತು ತಮ್ಮ ರಾಜ್ಯಗಳಲ್ಲಿ ಪಕ್ಷದ ಭವಿಷ್ಯದ ಬಗ್ಗೆ ನಾಯಕರಿಗೆ ತಿಳಿಸಲು ಮೇ 28 ರಂದು ದೆಹಲಿಗೆ ಆಗಮಿಸಿದ್ದರು.
ಐದು ದಕ್ಷಿಣ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ (UT)ಗಳಲ್ಲಿ ಒಟ್ಟು 130 ಸ್ಥಾನಗಳಿವೆ. ಈ ಪೈಕಿ 20 ಸ್ಥಾನಗಳನ್ನು ಹೊಂದಿರುವ ಕೇರಳ ರಾಜ್ಯ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ತಮಿಳುನಾಡು 39 ಸ್ಥಾನ ಮತ್ತು ಪುದುಚೇರಿ ಒಂದು ಸ್ಥಾನವನ್ನು ಹೊಂದಿದೆ. ಅಲ್ಲಿ ಅಧಿಕಾರದಲ್ಲಿರುವ ಡಿಎಂಕೆ-ಕಾಂಗ್ರೆಸ್ ಮೈತ್ರಿ ಹೆಚ್ಚಿನ ಸ್ಥಾನವನ್ನು ಗೆಲ್ಲುವ ಭರವಸೆ ಹೊಂದಿದೆ.
17 ಸ್ಥಾನಗಳನ್ನು ಹೊಂದಿರುವ ತೆಲಂಗಾಣ ಮತ್ತು 28 ಸ್ಥಾನಗಳನ್ನು ಹೊಂದಿರುವ ಕರ್ನಾಟಕ ಎರಡರಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸುವ ವಿಶ್ವಾಸ ಹೊಂದಿದೆ. ಆಂಧ್ರಪ್ರದೇಶವು 25 ಸ್ಥಾನಗಳನ್ನು ಹೊಂದಿದೆ. ಆದರೆ ಇಲ್ಲಿ ಕಾಂಗ್ರೆಸ್ಗೆ ಅಷ್ಟೊಂದು ಅನುಕೂಲಕರ ವಾತಾವರಣ ಇಲ್ಲ. ಇನ್ನು ಕರ್ನಾಟಕದಲ್ಲಿ 2019 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸೇರಿ ಬಿಜೆಪಿ 26 ಸ್ಥಾನಗಳಲ್ಲಿ ಗೆದ್ದು, ಕಾಂಗ್ರೆಸ್ಗೆ ಟಕ್ಕರ್ ಕೊಟ್ಟಿತ್ತು. ಆದರೆ ಈ ಬಾರಿ ಕಾಂಗ್ರೆಸ್ ತೀವ್ರ ಸ್ಪರ್ಧೆಯನ್ನು ನೀಡಿದೆ.
"ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ದಕ್ಷಿಣ ಭಾರತದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿವೆ. ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಉತ್ತಮ ಸಾಧನೆ ಮಾಡಿದೆ. ತೆಲಂಗಾಣದಲ್ಲಿ ನಾವು ಪ್ರಮುಖ ಆಟಗಾರರಾಗುತ್ತೇವೆ" ಎಂದು ತೆಲಂಗಾಣದ ಎಐಸಿಸಿ ಉಸ್ತುವಾರಿ ಪಿ ವಿಷ್ಣುನಾಥ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ. "ತೆಲಂಗಾಣದಲ್ಲಿ ಸಿಎಂ ರೇವಂತ ರೆಡ್ಡಿ ಜನಪ್ರಿಯತೆ ಮುಂದುವರೆದಿದೆ. ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ಪಕ್ಷವು ಆಕ್ರಮಣಕಾರಿ ಪ್ರಚಾರವನ್ನೂ ನಡೆಸಿದೆ ಎಂದು ಅವರು ಹೇಳಿದ್ದಾರೆ
ಕರ್ನಾಟಕದ ಎಐಸಿಸಿ ಉಸ್ತುವಾರಿ ಅಭಿಷೇಕ್ ದತ್ ಇದೇ ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಮತ್ತು ಫಲಿತಾಂಶದ ದಿನದಂದು ದಕ್ಷಿಣ ರಾಜ್ಯಗಳು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತವೆ ಎಂದು ಅವರು ಹೇಳಿದ್ದಾರೆ. "ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ. ನಾವು ರಾಜ್ಯದಲ್ಲಿ 15 ಪ್ಲಸ್ ಸೀಟುಗಳನ್ನು ಪಡೆಯಲಿದ್ದೇವೆ. ನಮ್ಮ ಚುನಾವಣಾ ಭರವಸೆಗಳ ಅನುಷ್ಠಾನ ಮತ್ತು ಬಿಜೆಪಿಯ ವಿಭಜಕ ರಾಜಕೀಯದಿಂದ ಜನರು ಬೇಸತ್ತಿರುವುದು ಇದಕ್ಕೆ ಕಾರಣ" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : 6ನೇ ಹಂತದ ಲೋಕ ಸಮರ: 58 ಕ್ಷೇತ್ರಗಳಿಗೆ ಮತದಾನ; ಪ್ರಮುಖ ಅಭ್ಯರ್ಥಿಗಳು ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ... - Lok Sabha Election 2024