ಹೈದರಾಬಾದ್: ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ತಪ್ಪೊಪ್ಪಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಬಿಜೆಪಿ ಕೂಡ ಕೆಸಿಆರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.
ಇದಕ್ಕೆ ಹಿರಿಯ ಬಿಆರ್‌ಎಸ್ ನಾಯಕ ಮತ್ತು ಮಾಜಿ ಸಂಸದ ವಿನೋದ್ ಕುಮಾರ್ ಪ್ರತಿಕ್ರಿಯಿಸಿ, ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ಪಕ್ಷ ನಿರಾಕರಿಸುತ್ತದೆ ಎಂದು ಹೇಳಿದ್ದಾರೆ.
'ಬಿ.ಎಲ್.ಸಂತೋಷ್ ಬಂಧಿಸಲು ಕೆಸಿಆರ್ ಪ್ಲ್ಯಾನ್': ಫೋನ್ ಕದ್ದಾಲಿಕೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ 'ಪೆದ್ದಾಯಣ' (ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಕೆಸಿಆರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಅವರನ್ನು ಪಕ್ಷದ ಶಾಸಕರನ್ನು ಬೇಟೆಯಾಡಲು ಯತ್ನಿಸಿದ ಆರೋಪದಲ್ಲಿ ಬಂಧಿಸಬೇಕೆಂದು ಬಯಸಿದ್ದರು ಎಂದು ಮಾಜಿ ಉಪ ಪೊಲೀಸ್ ಆಯುಕ್ತ ಪಿ.ರಾಧಾ ಕಿಶನ್ ರಾವ್ ಹೇಳಿದ್ದಾರೆ.
ಈ ಮೂಲಕ ಕೆಸಿಆರ್ ತಮ್ಮ ಪುತ್ರಿ ಹಾಗು ಎಂಎಲ್‌ಸಿ ಕೆ.ಕವಿತಾ ಅವರನ್ನು ಇಡಿ ಪ್ರಕರಣದಿಂದ ಹೊರ ತರಲು ಕೆಸಿಆರ್ ಯೋಜಿಸಿದ್ದರು ಎಂದು ಆರೋಪಿಸಲಾಗಿದೆ.
"ಮಾಜಿ ಪೊಲೀಸ್ ಅಧಿಕಾರಿಯ ತಪ್ಪೊಪ್ಪಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮತ್ತು ಈ ಕುರಿತ ವರದಿಯನ್ನು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಚರ್ಚಿಸಬೇಕು. ಕೆಸಿಆರ್, ಹರೀಶ್ ರಾವ್ ಮತ್ತು ಕೆಟಿಆರ್ ವಿರುದ್ಧ ಖಂಡನಾ ನಿರ್ಣಯ ಮಂಡಿಸುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಸ್ಪೀಕರ್ ಪ್ರಸಾದ್ ಕುಮಾರ್ ಅವರನ್ನು ಒತ್ತಾಯಿಸುತ್ತೇವೆ. ಕೆಸಿಆರ್ ವಿಧಾನಸಭೆ ಸದಸ್ಯತ್ವವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು" ಎಂದು ರಾಜ್ಯ ಕಾಂಗ್ರೆಸ್‌ನ ಹಿರಿಯ ಉಪಾಧ್ಯಕ್ಷ ಜಿ.ನಿರಂಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
''ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಬಿಆರ್‌ಎಸ್ ಮತ್ತು ಬಿಜೆಪಿ ಒಂದೇ ಶೈಲಿ ಹೊಂದಿವೆ ಎಂಬುದನ್ನು ಮಾಜಿ ಪೊಲೀಸ್ ಅಧಿಕಾರಿಯ ತಪ್ಪೊಪ್ಪಿಗೆ ತೋರಿಸುತ್ತದೆ. ಪ್ರತಿಪಕ್ಷಗಳನ್ನು ಮೂಲೆಗುಂಪು ಮಾಡಲು ಬಿಜೆಪಿ ಸಿಬಿಐ, ಇಡಿ ಮತ್ತು ಇತರ ಏಜೆನ್ಸಿಗಳನ್ನು ಬಳಸಿದರೆ, ಬಿಆರ್‌ಎಸ್ ಪೊಲೀಸರ ಎಸ್‌ಐಬಿ ಮತ್ತು ಟಾಸ್ಕ್ ಫೋರ್ಸ್ ಅನ್ನು ಎಷ್ಟು ನಿರ್ಲಜ್ಜವಾಗಿ ಬಳಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ'' ಎಂದಿರುವ ನಿರಂಜನ್, ''ಈ ವಿಚಾರದಲ್ಲಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರ ಪಾತ್ರದ ಬಗ್ಗೆಯೂ ತನಿಖೆಯಾಗಬೇಕು'' ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕುಟುಂಬದ 8 ಸದಸ್ಯರ ಕೊಂದು ಆತ್ಮಹತ್ಯೆಗೆ ಶರಣಾದ ಮನೆ ಯಜಮಾನ - Chhindwara Murder Case