ಹೈದರಾಬಾದ್: ಹೈದರಾಬಾದ್ ಬಳಿ 200 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಮಹತ್ವಾಕಾಂಕ್ಷೆಯ ಕೃತಕ ಬುದ್ಧಿಮತ್ತೆ ನಗರ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಿಟಿ) ಯೋಜನೆಯನ್ನು ತೆಲಂಗಾಣ ಸರ್ಕಾರ ಗುರುವಾರ ಅನಾವರಣಗೊಳಿಸಿದೆ.
ಅತ್ಯಾಧುನಿಕ ಎಐ ಸಿಟಿ ಎಐ ಪರಿಸರ ವ್ಯವಸ್ಥೆಗೆ ಪೂರಕ ಕೇಂದ್ರವಾಗಿ ಕೆಲಸ ಮಾಡಲಿದೆ. ಇದಕ್ಕಾಗಿ ಎಐ ಸಂಶೋಧನೆ ಮತ್ತು ಸಹಯೋಗ ಜಾಲ, ಪ್ರಮುಖ ವಿಶ್ವವಿದ್ಯಾಲಯಗಳು, ಜಾಗತಿಕ ನಿಗಮಗಳು ಮತ್ತು ನವೀನ ಸ್ಟಾರ್ಟ್ಅಪ್ಗಳ ಬೆಂಬಲದೊಂದಿಗೆ ಎಐ ಸಲಹಾ ಮಂಡಳಿಯೊಂದನ್ನು ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಗುರುವಾರ ಇಲ್ಲಿ ಪ್ರಾರಂಭವಾದ ಜಾಗತಿಕ ಎಐ ಶೃಂಗಸಭೆ 2024 ರಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಎಐ ಸಿಟಿ ಲಾಂಛನವನ್ನು ಅನಾವರಣಗೊಳಿಸಿದರು. "ತೆಲಂಗಾಣದಲ್ಲಿ ಎಐ ಕ್ರಾಂತಿ ಹೊಸದಲ್ಲ. ರಾಜ್ಯವು ಈಗಾಗಲೇ ಈ ವಿಷಯದಲ್ಲಿ ದೊಡ್ಡ ಕ್ರಮಗಳನ್ನು ಕೈಗೊಂಡಿದೆ. ನಾವು ಭಾರತದ ಭವಿಷ್ಯದ ಬಗ್ಗೆ ಯೋಚಿಸುವುದಾದರೆ ಹೈದರಾಬಾದ್ನಷ್ಟು ಬೇರೆ ಯಾವುದೇ ನಗರವು ಅದಕ್ಕೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಹೈದರಾಬಾದ್ನಲ್ಲಿ ನಾವು ಭವಿಷ್ಯವನ್ನು ಅಳವಡಿಸಿಕೊಳ್ಳುವುದು ಮಾತ್ರವಲ್ಲದೇ ನಾವು ಅದನ್ನು ರಚಿಸುತ್ತೇವೆ" ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದರು.
"ಎಐ ಸಿಟಿ ಉದ್ಯಮದ ಬೆಳವಣಿಗೆಗಾಗಿ ಸೂಕ್ತ ಸಹಯೋಗದ ವಾತಾವರಣ ಸೃಷ್ಟಿಸಲಿದೆ. ಮುಂದಿನ ಪೀಳಿಗೆಯ ಎಐ ತಂತ್ರಜ್ಞಾನಗಳು ಮತ್ತು ಪರಿಹಾರಗಳ ಅಭಿವೃದ್ಧಿಗೆ ವೇದಿಕೆಯನ್ನು ಒದಗಿಸಲಿದೆ. ಇದು ಅತ್ಯಾಧುನಿಕ ಡೇಟಾ ಕೇಂದ್ರಗಳು ಮತ್ತು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಸಂಯೋಜಿಸುವ ಮೂಲಕ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಅವಕಾಶ ನೀಡಲಿದೆ. ಈ ಸಿಟಿ ನಾಗರಿಕರಿಗೆ ಕೃತಕ ಬುದ್ಧಿಮತ್ತೆಯ ಜಗತ್ತಿಗೆ ನೇರ ಪ್ರವೇಶ ನೀಡಲಿದೆ. ಆಳವಾದ ಅನುಭವಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಂವಾದಾತ್ಮಕ ಪ್ರದರ್ಶನಗಳ ಮೂಲಕ, ಎಐ ಸಿಟಿ ಎಐ ಅನ್ನು ವ್ಯಾಖ್ಯಾನಿಸಲಿದೆ" ಎಂದು ರಾಜ್ಯ ಸರ್ಕಾರ ಹೇಳಿದೆ.
ಯೋಜಿತ ನಗರವು ಎಐ ಸ್ಕಿಲ್ಡ್ ಯೂನಿವರ್ಸಿಟಿ ಮತ್ತು ಎಕ್ಸ್ ಪೀರಿಯಂಟಲ್ ಸೆಂಟರ್ ಮೂಲಕ ಎಐ - ನುರಿತ ಪ್ರತಿಭಾವಂತರನ್ನು ರೂಪಿಸಲಿದೆ. ಎಐ ಸಿಟಿಯ ವಿವಿಧ ಘಟಕಗಳಿಗಾಗಿ ರಾಜ್ಯ ಸರ್ಕಾರವು ವಿವಿಧ ಕಂಪನಿಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಸಚಿವ ಡಿ.ಶ್ರೀಧರ್ ಬಾಬು ಮಾತನಾಡಿ, ಎಐ ಸಿಟಿ ರೂಪುಗೊಳ್ಳುತ್ತಿರುವ ಮಧ್ಯೆ ಎಐ ವಲಯದ ಕಂಪನಿಗಳು ಶಂಶಾಬಾದ್ನ ವಿಶ್ವ ವ್ಯಾಪಾರ ಕೇಂದ್ರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಇಲ್ಲಿ ತ್ವರಿತವಾಗಿ ತಮ್ಮ ಕಂಪನಿಗಳನ್ನು ಸ್ಥಾಪಿಸಬಹುದು ಎಂದು ಹೇಳಿದರು. ಕಾರ್ಪೊರೇಟ್ಗಳು, ಶಿಕ್ಷಣ ತಜ್ಞರು, ಸ್ಟಾರ್ಟ್ಅಪ್ಗಳು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸುಮಾರು 2,000 ಪ್ರತಿನಿಧಿಗಳು ಜಾಗತಿಕ ಎಐ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.
ಇದನ್ನೂ ಓದಿ : ಹೇಮಾ ಸಮಿತಿ ವರದಿಯ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ: ಕೇರಳ ಹೈಕೋರ್ಟ್ - Hema Committee Report