ಹೈದರಾಬಾದ್: ಭಾರತದಲ್ಲಿ ಅಕ್ರಮವಾಗಿ ಕಿಡ್ನಿ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಕಿಡ್ನಿ ಕಸಿಗಾಗಿ ಕಾದು ಕುಳಿತವರ ಸಂಖ್ಯೆ ದೊಡ್ಡದಿರುವ ಹಿನ್ನೆಲೆ ಕಿಡ್ನಿ ಮಾರಾಟದ ಅಕ್ರಮ ಜಾಲಗಳು ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವುದು ಅನೇಕ ವೇಳೆ ಬೆಳಕಿಗೆ ಬಂದಿದೆ. ಇದೀಗ ಈ ದಂಧೆಕೋರರು ಹೈಟೆಕ್ ಮಾರ್ಗ ಆರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಅಕ್ರಮ ಮಾರಾಟ ಚಟುವಟಿಕೆಯಲ್ಲಿ ತೊಡಗಿರುವ ಪ್ರಕರಣ ಕಂಡು ಬಂದಿದ್ದು, ಈ ಸಂಬಂಧ ತೆಲಂಗಾಣ ಸಿಐಡಿ ಕಾರ್ಯಾಚರಣೆಗೆ ಇಳಿದಿದೆ.
ತೆಲಂಗಾಣದಲ್ಲಿ ಅಕ್ರಮವಾಗಿ ಕಿಡ್ನಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟ ಕುರಿತು ಜಾಹೀರಾತು ನೀಡಿರುವ ಸಂಬಂಧ ಸಾಮಾಜಿಕ ಕಾರ್ಯಕರ್ತರು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆ ಇದೀಗ ಈ ಸಾಮಾಜಿಕ ಜಾಲತಾಣದ ಗುಂಪಿನ ತನಿಖೆಗೆ ಪೊಲೀಸರು ಮುಂದಾಗಿದ್ದು, ಅವರು ಮಾನವ ಅಂಗಾಂಗ ಕಸಿ 1994 ಕಾಯ್ದೆಯ ಸೆಕ್ಷನ್ 18 ಮತ್ತು 19ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಟೆಲಿಗ್ರಾಂ ಆ್ಯಪ್ ಸೇರಿದಂತೆ ವಿವಿಧ ಚಾನಲ್ಗಳಲ್ಲಿ ಕಿಡ್ನಿ ಮಾರಾಟದ ಕುರಿತು ವಿಷಯಗಳು ಬೆಳಕಿಗೆ ಬಂದ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತರೊಬ್ಬರು ಸಿಐಡಿಗೆ ತಿಳಿಸಿದ್ದು, ಕಿಡ್ನಿ ಅವಶ್ಯಕತೆ ಉಳ್ಳವನು ರಹಸ್ಯವಾಗಿ ಗ್ಯಾಂಗ್ ಪತ್ತೆ ಮಾಡಿ ಈ ಗುಂಪಿಗೆ ಸೇರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಗುಂಪಿಗೆ ಆಡ್ಮಿನ್ ಮಾತ್ರವೇ ಸದಸ್ಯರನ್ನು ಸೇರಿಸಬಹುದಾಗಿದೆ. ಇದು ಸೈಬರ್ ವಂಚನೆ ಅಥವಾ ಕಿಡ್ನಿ ಮಾರಾಟ ಜಾಲವಾ ಎಂಬುದನ್ನು ಪತ್ತೆ ಮಾಡಬೇಕಿದೆ. ಕಿಡ್ನಿ ಸಂತ್ರಸ್ತರನ್ನು ಹುಡುಕಿ ಈ ಗುಂಪು ರಚಿಸಲಾಗಿದ್ದು, ಇವರಿಗೆ ಹಣದಲ್ಲಿ ಅಥವಾ ಅಂಗಾಂಗದಲ್ಲಿ ವಂಚನೆ ನಡೆಸಲಾಗಿದೆಯಾ ಎಂಬುದನ್ನು ಪತ್ತೆ ಮಾಡಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಕೂಡ ರಾಜ್ಯದಲ್ಲಿ ಈ ರೀತಿ ಕಿಡ್ನಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದರು. ಹೈದರಾಬಾದ್ ಮತ್ತು ರಚಕೊಂಡ ಆಯುಕ್ತರ ಜೊತೆಗೆ ಸಿಐಡಿ ಈ ಪ್ರಕರಣ ಬೇಧಿಸಿತ್ತು. ಈ ಜಾಲವೂ ಕಿಡ್ನಿಯನ್ನು ಶ್ರೀಲಂಕಾಕ್ಕೆ ಕೊಂಡೊಯ್ದು ಅಲ್ಲಿ ಕಸಿ ಮಾಡುತ್ತಿದ್ದು, ಪೊಲೀಸರ ತನಿಖೆ ವೇಳೆ ಪತ್ತೆಯಾಗಿತ್ತು. 2016ರ ಪ್ರಕರಣಕ್ಕೆ ಸಿಐಡಿ ಕಳೆದ ವರ್ಷ ಚಾರ್ಜ್ ಶೀಟ್ ಹಾಕಿದೆ. ಇತ್ತೀಚಿನ ಪ್ರಕರಣ ಕುರಿತು ಹಳೆ ಗ್ಯಾಂಗ್ಗೆ ನಂಟಿರಬಹುದೇ ಎಂಬ ಸಂಬಂಧ ಸಿಐಡಿ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ: ಹರ್ನಿಯಾ ಆಪರೇಷನ್ಗೆ ಹೋದ ರೋಗಿಯ ಮೂತ್ರಪಿಂಡವೇ ಕಣ್ಮರೆ; ಪರಿಹಾರಕ್ಕೆ ಆದೇಶಿಸಿದ ಗ್ರಾಹಕ ಆಯೋಗ