ಜೌನ್ಪುರ(ಉತ್ತರ ಪ್ರದೇಶ): ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ ಅತುಲ್ ಸುಭಾಷ್ ಅವರ ಅತ್ತೆ ಮತ್ತು ಸೋದರ ಮಾವ ಗುರುವಾರ ಜೌನ್ಪುರದಲ್ಲಿರುವ ತಮ್ಮ ಮನೆಯಿಂದ ಪಲಾಯನ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಪ್ರಕರಣದ ಕುರಿತಾಗಿ ಕರ್ನಾಟಕದ ಪೊಲೀಸರು ತಮಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಯುಪಿ ಪೊಲೀಸರು ಹೇಳಿದ್ದಾರೆ.
ತನ್ನ ವಿಚ್ಛೇದಿತ ಪತ್ನಿ ಮತ್ತು ಅವರ ಕುಟುಂಬದಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ 34 ವರ್ಷದ ಟೆಕ್ಕಿ ಸೋಮವಾರ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ನಿಕಿತಾ ಸಿಂಘಾನಿಯಾ, ತಾಯಿ ನಿಶಾ, ತಂದೆ ಅನುರಾಗ್ ಮತ್ತು ಚಿಕ್ಕಪ್ಪ ಸುಶೀಲ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆ.
ಮುಂಜಾನೆ 1 ಗಂಟೆ ಸುಮಾರಿಗೆ ನಿಶಾ ಸಿಂಘಾನಿಯಾ ಮತ್ತು ಅವರ ಮಗ ಅನುರಾಗ್ ಅಲಿಯಾಸ್ ಪಿಯೂಷ್ ಸಿಂಘಾನಿಯಾ ಇಲ್ಲಿನ ಖೋವಾ ಮಂಡಿ ಪ್ರದೇಶದಲ್ಲಿರುವ ತಮ್ಮ ಮನೆಯಿಂದ ಮೋಟಾರ್ ಸೈಕಲ್‌ನಲ್ಲಿ ಹೊರಟವರು ಮತ್ತೆ ಹಿಂತಿರುಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಅವರು ಮಧ್ಯರಾತ್ರಿಯ ಸುಮಾರಿಗೆ ಮನೆಯಿಂದ ಹೊರಹೋಗುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತುಣುಕುಗಳಲ್ಲಿ ಕಾಣಿಸಿದೆ.
"ಈ ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸರಿಂದ ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಅಗತ್ಯವಿರುವಷ್ಟು ವಾಡಿಕೆಯ ಮಟ್ಟದ ಪೊಲೀಸ್ ನಿಯೋಜನೆ ಖೋವಾ ಮಂಡಿ ಪ್ರದೇಶದಲ್ಲಿ ಇದೆ" ಎಂದು ಜೌನ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಕೋತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಇನ್ ಸ್ಪೆಕ್ಟರ್ ಮಿಥಿಲೇಶ್ ಮಿಶ್ರಾ, "ನಿಶಾ ಸಿಂಘಾನಿಯಾ ಮತ್ತು ಇತರರನ್ನು ಬಂಧಿಸಲು ಅಥವಾ ಮನೆಯಿಂದ ಹೊರಹೋಗದಂತೆ ತಡೆಯಲು ಅಥವಾ ಅವರನ್ನು ಗೃಹಬಂಧನದಲ್ಲಿಡುವಂತೆ ಪೊಲೀಸರಿಗೆ ಯಾವುದೇ ಆದೇಶಗಳು ಬಂದಿಲ್ಲ" ಎಂದು ಹೇಳಿದರು.
ನಿಕಿತಾ ಕುಟುಂಬವು ಜೌನ್ಪುರದಲ್ಲಿ ವಾಸಿಸುತ್ತಿದ್ದರೆ, ಅವರು ತನ್ನ ಮಗನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಅವರು 2019 ರ ಏಪ್ರಿಲ್‌ನಲ್ಲಿ ಸುಭಾಷ್ ಅವರನ್ನು ವಿವಾಹವಾಗಿದ್ದರು ಮತ್ತು 2022ರಲ್ಲಿ ಪತಿ ಸುಭಾಷ್ ಮತ್ತು ಅತ್ತೆ ಮಾವಂದಿರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದರು.