ಅಮರಾವತಿ (ಆಂಧ್ರಪ್ರದೇಶ) : ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮುಂಬರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಅದೇ ರೀತಿ ಮುಂಬರುವ ವಿಧಾನಸಭೆ ಚುನಾವಣೆ 2024ಕ್ಕೆ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ 34 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪೀಠಾಪುರಂ ವಿಧಾನಸಭಾ ಕ್ಷೇತ್ರವು ಕಾಕಿನಾಡ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ. ಪ್ರಸ್ತುತ ಈ ಕ್ಷೇತ್ರವನ್ನು ವೈಎಸ್‌ಆರ್‌ಸಿ ಶಾಸಕ ಪ್ರತಿನಿಧಿಸುತ್ತಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಗಾಜುವಾಕ ಮತ್ತು ಭೀಮಾವರಂ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಿ ಸೋತಿದ್ದರು.
ಪವನ್ ಕಲ್ಯಾಣ್ ಅವರ ಜನಸೇನಾ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿದ್ದು, ಲೋಕಸಭೆ ಮತ್ತು ವಿಧಾನಸಭೆಗೆ ಇವೆರಡು ಸೀಟು ಹಂಚಿಕೆ ಮಾಡಿಕೊಂಡಿವೆ. ವಿಧಾನಸಭೆಯಲ್ಲಿ ಟಿಡಿಪಿ 144, ಜನಸೇನಾ 21 ಮತ್ತು ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಲೋಕಸಭೆಯಲ್ಲಿ ಟಿಡಿಪಿ 17, ಬಿಜೆಪಿ 6, ಜನಸೇನಾ 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿವೆ ಎಂಬುದಾಗಿ ತಿಳಿದು ಬಂದಿದೆ.
ಚಂದ್ರಬಾಬು ನಾಯ್ಡು ಟ್ವೀಟ್: ಪಟ್ಟಿ ಬಿಡುಗಡೆ ಮಾಡಿ ಟ್ವೀಟ್ ಮಾಡಿರುವ ಟಿಡಿಪಿ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು, ಮೊದಲ ಪಟ್ಟಿಯಂತೆಯೇ ಎರಡನೇ ಪಟ್ಟಿಯು ಒಳಗೊಳ್ಳುವಿಕೆ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಒಳಗೊಂಡಿರುತ್ತದೆ. ಮತದಾರರ ಆದ್ಯತೆಗಳು ಮತ್ತು ಅಗತ್ಯಗಳನ್ನು ಪರಿಗಣಿಸಿ ಪ್ರತಿಯೊಬ್ಬ ಅಭ್ಯರ್ಥಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಎಲ್ಲ ಟಿಡಿಪಿ ಅಭ್ಯರ್ಥಿಗಳನ್ನು ಆಶೀರ್ವದಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ಗುರಿಗಳನ್ನು ಸಾಧಿಸುವಲ್ಲಿ ಸಾರ್ವಜನಿಕ ಬೆಂಬಲದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು ಮತ್ತು ಜನರ ಹಿತಾಸಕ್ತಿಗಳನ್ನು ಪೂರೈಸಲು ಟಿಡಿಪಿಯ ಅಚಲ ಬದ್ಧತೆಯನ್ನು ಪುನರುಚ್ಚರಿಸಿದರು. ಅಭ್ಯರ್ಥಿಗಳು ವಿವಿಧ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದು, ಒಬ್ಬರು ಪಿಎಚ್‌ಡಿ, 11 ಮಂದಿ ಸ್ನಾತಕೋತ್ತರ ಪದವಿ ಮತ್ತು 9 ಮಂದಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ : ವಿಧಾನಸಭೆ-ಲೋಕಸಭಾ ಚುನಾವಣೆ: 175 ರಲ್ಲಿ 118 ಸ್ಥಾನಗಳ ಅಭ್ಯರ್ಥಿಯ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜನಸೇನಾ, ಟಿಡಿಪಿ