ಊಟಿ (ತಮಿಳುನಾಡು): ನಿರ್ಮಾಣ ಹಂತದ ಕಟ್ಟಡದ ಪಕ್ಕದ ಮನೆಯ ಗೋಡೆ ಮತ್ತು ಭೂಕುಸಿದ ಪರಿಣಾಮ ಆರು ಮಹಿಳಾ ಕಾರ್ಮಿಕರು ಮೃತಪಟ್ಟ ದುರ್ಘಟನೆ ತಮಿಳುನಾಡಿನ ಊಟಿಯಲ್ಲಿ ಇಂದು ನಡೆದಿದೆ. ಮೃತರನ್ನು ಶಕೀಲಾ (30), ಸಂಗೀತಾ (35), ಭಾಗ್ಯ (36), ಉಮಾ (35), ಮುತ್ತುಲಕ್ಷ್ಮೀ (36) ಮತ್ತು ರಾಧಾ (38) ಎಂದು ಗುರುತಿಸಲಾಗಿದೆ.
ಇಲ್ಲಿನ ಲವ್‌ಡೇಲ್ ಎಂಬ ಪ್ರದೇಶದಲ್ಲಿ ಮಹಿಳಾ ಕಾರ್ಮಿಕರು ಕಟ್ಟಡ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ, ಮರಳು ತೆಗೆಯುತ್ತಿದ್ದಾಗ ಪಕ್ಕದ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಕನಿಷ್ಠ ಆರು ಮಂದಿ ಕಾರ್ಮಿಕರು ಅವಶೇಷಗಳಡಿ ಸಿಲುಕಿ ಅಲ್ಲಿಯೇ ಭೂಸಮಾಧಿಯಾಗಿದ್ದಾರೆ. ಆಗ ಕೂಡಲೇ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಆರು ಮಹಿಳೆಯರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹೇಶ್, ಶಾಂತಿ, ಜಯಂತಿ ಮತ್ತು ಥಾಮಸ್ ಎಂಬುವರನ್ನು ಊಟಿಯ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಮತ್ತೊಬ್ಬರು ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾಪ್ರಸಾದ ಸೇವಿಸಿದ ಸಾವಿರಕ್ಕೂ ಹೆಚ್ಚು ಭಕ್ತರು ಅಸ್ವಸ್ಥ