ಚೆನ್ನೈ(ತಮಿಳುನಾಡು): ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಮತ್ತು ನಾರಿ ಶಕ್ತಿ ಪುರಸ್ಕಾರ ಪಡೆದಿರುವ ಮಧುರೈನ 72 ವರ್ಷದ ಚಿನ್ನಪಿಳ್ಳೈ ಅವರಿಗೆ ತಮಿಳುನಾಡು ಸರ್ಕಾರ ಮನೆ ಮಂಜೂರು ಮಾಡಿದೆ. ಈಟಿವಿ ಭಾರತ್ ತಮಿಳುನಾಡು ಶುಕ್ರವಾರ ಮಹಿಳಾ ದಿನದ ನಿಮಿತ್ತ ಚಿನ್ನಪಿಳ್ಳೈ ಅವರ ಸದ್ಯದ ಸ್ಥಿತಿಗತಿಯ ಬಗ್ಗೆ ಸುದ್ದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ತಮಿಳುನಾಡು ಸರ್ಕಾರ ಅವರಿಗೆ ಮನೆ ಮಂಜೂರು ಕೂಡಾ ಮಾಡಿದೆ.
ಈಟಿವಿ ಭಾರತ್ ತಮಿಳುನಾಡಿಗೆ ಚಿನ್ನಪಿಳ್ಳೈ ಅವರು ಸಂದರ್ಶನ ನೀಡಿ, "ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮನೆಗಾಗಿ ಅರ್ಜಿ ಸಲ್ಲಿಸಿ ಮೂರು ವರ್ಷಗಳು ಕಳೆದರೂ ಅಧಿಕಾರಿಗಳು ಮನೆ ನಿರ್ಮಿಸಿಕೊಟ್ಟಿಲ್ಲ" ಎಂದು ನಿರಾಶೆ ವ್ಯಕ್ತಪಡಿಸಿದರು. ಈ ಸುದ್ದಿ ಗಮನಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚಿನ್ನಪಿಳ್ಳೈ ಅವರಿಗೆ 'ಕಲೈಂಗರ್ ಡ್ರೀಮ್ ಹೌಸ್' ಯೋಜನೆಯಡಿ ತಕ್ಷಣವೇ ಮನೆ ನಿರ್ಮಿಸಿ ಕೊಡುವಂತೆ ಆದೇಶಿಸಿದ್ದರು.
ಈ ಕುರಿತು ಮುಖ್ಯಮಂತ್ರಿ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿ, "2000ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ನಾರಿ ಶಕ್ತಿ ಪುರಸ್ಕಾರಕ್ಕೆ ಭಾಜನರಾದ ಮಧುರೈ ಜಿಲ್ಲೆಯ ಪದ್ಮಶ್ರೀ ಚಿನ್ನಪಿಳ್ಳೈ ಅವರು, ಭರವಸೆಗಳ ಹೊರತಾಗಿಯೂ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಯನ್ನು ಒದಗಿಸಲಾಗಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚಿನ್ನಪಿಳ್ಳೈ ಅವರಿಗೆ ಹೊಸ ಮನೆ ನಿರ್ಮಿಸಿ ಕೊಡಲು ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಈಗಾಗಲೇ ಸರ್ಕಾರ ಮಂಜೂರು ಮಾಡಿರುವ ಒಂದು ಸೆಂಟ್ ನಿವೇಶನದ ಜೊತೆಗೆ ಪಿಳ್ಳಚೇರಿ ಪಂಚಾಯಿತಿಯ ಪಾರ್ಥಿವಪಟ್ಟಿ ಗ್ರಾಮದಲ್ಲಿ ಚಿನ್ನಪಿಳ್ಳೈ ಅವರಿಗೆ ಹೆಚ್ಚುವರಿಯಾಗಿ 380 ಚದರ ಅಡಿ ಜಾಗವನ್ನು ಗುತ್ತಿಗೆ ನೀಡಲಾಗುವುದು. ಮನೆ ನಿರ್ಮಾಣವು ಈ ತಿಂಗಳಿನಿಂದಲೇ ಪ್ರಾರಂಭವಾಗಲಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರ ಘೋಷಣೆಯ ಬಳಿಕ ಈಟಿವಿ ಭಾರತ್ ತಮಿಳುನಾಡಿನ ಜೊತೆ ಮಾತನಾಡಿದ ಚಿನ್ನಪಿಳ್ಳೆ, ಈಟಿವಿ ಭಾರತ್ ತಮಿಳುನಾಡಿಗೆ ತುಂಬು ಹೃದಯದ ಧನ್ಯವಾದಗಳು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ದೇಶಾದ್ಯಂತ ಮದ್ಯಪಾನ ನಿರ್ಮೂಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳುವಂತೆ ಇದೇ ವೇಳೆ ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್ ಜೊತೆ ಮೈತ್ರಿ ಮಾಡಿಕೊಂಡ ಡಿಎಂಕೆ: ಮಕ್ಕಳ್ ನೀಧಿ ಮೈಯಂಗೆ ರಾಜ್ಯಸಭೆಯಲ್ಲಿ ಒಂದು ಸ್ಥಾನ ನೀಡಲು ಒಪ್ಪಿಗೆ