ನವದೆಹಲಿ: NTA 2025 ಪರೀಕ್ಷೆಗಳಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. 2025 ರಿಂದ ಎನ್‌ಟಿಎ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪರೀಕ್ಷೆಗಳನ್ನು ಮಾತ್ರ ನಡೆಸುತ್ತದೆ ಮತ್ತು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಪೆನ್- ಪೇಪರ್ ಇಲ್ಲವೇ ಆನ್ಲೈನ್: ಮುಂದಿನ ವರ್ಷದಿಂದ NEET-UG ಪರೀಕ್ಷೆಯನ್ನು ಪೆನ್-ಪೇಪರ್ ಮೋಡ್ ಅಥವಾ ಆರೋಗ್ಯ ಸಚಿವಾಲಯದೊಂದಿಗೆ ಸೇರಿಕೊಂಡು ಆನ್‌ಲೈನ್‌ನಲ್ಲಿ ನಡೆಸಬೇಕು ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಭವಿಷ್ಯದಲ್ಲಿ ಕಂಪ್ಯೂಟರ್ ಅಡಾಪ್ಟಿವ್ ಪರೀಕ್ಷೆ ಮತ್ತು ಟೆಕ್ ಆಧಾರಿತ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಚಿಂತಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 2025ರಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯನ್ನೂ ಸಂಪೂರ್ಣವಾಗಿ ಶುದ್ಧೀಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರವೇಶ ಪರೀಕ್ಷೆಗಳಿಗೆ ಮಾತ್ರವೇ NTA - ಸೀಮಿತ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಇರುವ ಪ್ರವೇಶ ಪರೀಕ್ಷೆಗಳನ್ನು ನಡೆಸುವುದಷ್ಟೇ NTA ಸೀಮಿತವಾಗಿರುತ್ತದೆ. ಮುಂದಿನ ವರ್ಷದಿಂದ ಎನ್ ಟಿಎದಿಂದ ಯಾವುದೇ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUTE) -ಯುಜಿ ವರ್ಷಕ್ಕೊಮ್ಮೆ ನಡೆಸಲಾಗುವುದು . ಶೂನ್ಯ ದೋಷ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು NTA ಕಾರ್ಯಗಳಲ್ಲಿ ಅನೇಕ ಬದಲಾವಣೆಗಳಿರುತ್ತವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಅಮೂಲಾಗ್ರ ಬದಲಾವಣೆ: ಈ ವರ್ಷ NEET ಪರೀಕ್ಷೆಯ ಪತ್ರಿಕೆ ಸೋರಿಕೆ ಮತ್ತು ಇತರ ದೋಷಗಳಿಂದಾಗಿ ಅನೇಕ ಪರೀಕ್ಷೆಗಳು ರದ್ದಾದ ಕಾರಣ NTA ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಮಿತಿಯ ಶಿಫಾರಸಿನಂತೆ ಇತ್ತೀಚಿನ ಸುಧಾರಣೆಗಳನ್ನು ತರಲಾಗಿದೆ. NTA ಕೇವಲ ಪ್ರವೇಶ ಪರೀಕ್ಷೆಗಳನ್ನು ನಡೆಸಲು ಮಾತ್ರ ಸೀಮಿತವಾಗಿದೆ. ಉದ್ಯೋಗ ಸಂಬಂಧಿತ ಪರೀಕ್ಷೆಗಳನ್ನು ನಡೆಸಲು ಬೇರೊಂದು ವ್ಯವಸ್ಥೆ ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನಿಸಿದೆ.
ಇದನ್ನು ಓದಿ:ಹೊಸ ಭಾಷೆ ಕಲಿಯಬೇಕೇ; ಹಾಗಾದ್ರೆ ತಜ್ಞರು ನೀಡಿರುವ ಈ ಯಶಸ್ಸಿನ ಮಂತ್ರ ಪಾಲಿಸಿ