ಮುಂಬೈ (ಮಹಾರಾಷ್ಟ್ರ): ಟಿ20 ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಕ್ರಿಕೆಟಿಗರನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಇಲ್ಲಿನ ವಿಧಾನ ಭವನದಲ್ಲಿ ಶುಕ್ರವಾರ ಸನ್ಮಾನಿಸಿದರು.
ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ದಕ್ಷಿಣ ಮುಂಬೈನಲ್ಲಿರುವ ಅವರ ಅಧಿಕೃತ ನಿವಾಸ 'ವರ್ಷ'ದಲ್ಲಿ ಶುಕ್ರವಾರ ಭೇಟಿಯಾದರು. ಮುಖ್ಯಮಂತ್ರಿಗಳು ಆಟಗಾರರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಬ್ಯಾಟರ್ ಸಂಜು ಸ್ಯಾಮ್ಸನ್, ಆರಂಭಿಕ ಯಶಸ್ವಿ ಜೈಸ್ವಾಲ್, ಆಲ್ ರೌಂಡರ್ ಶಿವಂ ದುಬೆ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರನ್ನು ಸಿಎಂ ಸನ್ಮಾನಿಸಿದರು.
ರೋಹಿತ್ ಶರ್ಮಾ, ಸೂರ್ಯಕುಮಾರ್ ಮುಂಬೈ ಮೂಲದವರಾಗಿದ್ದರೆ. ಉತ್ತರ ಪ್ರದೇಶ ಮೂಲಕ ಶಿವಂ ದುಬೆ ಮತ್ತು ಜೈಸ್ವಾಲ್ ಅವರು ಮುಂಬೈನಲ್ಲಿ ನೆಲೆಸಿದ್ದಾರೆ. ಟಿ20 ವಿಶ್ವಕಪ್ ಜೊತೆಗೆ ಭಾರತ ತಂಡವು ಗುರುವಾರ ತವರಿಗೆ ಆಗಮಿಸಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ತಂಡದೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
ಟಿ-20 ವಿಶ್ವಕಪ್ ವಿಜೇತ ಟೀಂ ಇಂಡಿಯಾಗೆ ಮುಂಬೈನಲ್ಲಿ ಗುರುವಾರ ಸಂಜೆ ಭವ್ಯ ಸ್ವಾಗತ ನೀಡಲಾಯಿತು. ಅರಬ್ಬಿ ಸಮುದ್ರ ತೀರದ ಮರೀನ್ ಡ್ರೈವ್ನಲ್ಲಿ ಲಕ್ಷಾಂತರ ಜನದ ಮಧ್ಯೆ ನೆಚ್ಚಿನ ಕ್ರಿಕೆಟಿಗರಿಗೆ ಭವ್ಯ ಮೆರವಣಿಗೆ ನೀಡಲಾಯಿತು. ಕಿಕ್ಕಿರಿದು ಸೇರಿದ್ದ ಕ್ರಿಕೆಟ್‌ಪ್ರೇಮಿಗಳ ಜೈಕಾರ ಮುಗಿಲು ಮುಟ್ಟಿತ್ತು. ಮತ್ತೊಂದೆಡೆ, ವಾಂಖೆಡೆ ಮೈದಾನ ಹರ್ಷೋದ್ಗಾರಗಳಿಂದ ಪ್ರತಿಧ್ವನಿಸಿತು.
ಕೆರಿಬಿಯನ್ ದ್ವೀಪ ಬಾರ್ಬಡೊಸ್‌ನಲ್ಲಿ ಜೂನ್ 29ರಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಮೂಲಕ ತಂಡ 17 ವರ್ಷಗಳ ಬಳಿಕ ಮತ್ತೆ ವಿಶ್ವಕಪ್ಗೆ ಮುತ್ತಿಕ್ಕಿತು.
ಇದನ್ನೂ ಓದಿ : ಜಸ್ಪ್ರೀತ್ ಬುಮ್ರಾ 'ವಿಶ್ವದ ಎಂಟನೇ ಅದ್ಭುತ' ಎಂದು ಬಣ್ಣಿಸಿದ ವಿರಾಟ್ ಕೊಹ್ಲಿ - 8th Wonder Of World