ಸೂರ್ಯಪೇಟೆ(ತೆಲಂಗಾಣ): ಸೂರ್ಯಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಮೃತ ವಡ್ಲಕೊಂಡ ಕೃಷ್ಣನ ಪತ್ನಿ ಭಾರ್ಗವಿಯ ಕುಟುಂಬದ ನಾಲ್ವರು ಹಾಗೂ ಇತರ ಇಬ್ಬರು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಭಾರ್ಗವಿಯ ಇಬ್ಬರು ಸಹೋದರರು ನವೀನ್ ಹಾಗೂ ವಂಶಿ, ಅಜ್ಜಿ ಬುಚ್ಚಮ್ಮ, ತಂದೆ ಸೈದುಲ ಮತ್ತು ನವೀನ್ ಸ್ನೇಹಿತರಾದ ಮಹೇಶ್ ಹಾಗೂ ಸಾಯಿ ಚರಣ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ಕಾರು 5 ಮೊಬೈಲ್ ಫೋನ್ ಮತ್ತು ಚಾಕು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಸಂಪ್ರೀತ್ ಸಿಂಗ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಎಸ್ಪಿ ನೀಡಿದ ಮಾಹಿತಿ ಹೀಗಿದೆ; "ಸೂರ್ಯಪೇಟೆಯ ಮಾಮಿಲಗುಡ್ಡದ ವಡ್ಲಕೊಂಡ ಕೃಷ್ಣ ಹಾಗೂ ಕೋಟ್ಲಾ ಭಾರ್ಗವಿ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ತಂಗಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕೋಪಗೊಂಡಿದ್ದ ಭಾರ್ಗವಿಯ ಸಹೋದರರು, ಎರಡು ತಿಂಗಳುಗಳಿಂದ ಕೃಷ್ಣನನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದರು. ಯೋಜನೆಯಂತೆ ಆರೋಪಿಗಳಲ್ಲಿ ಒಬ್ಬನಾದ ಬೈರು ಮಹೇಶ್, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸೂರ್ಯಪೇಟೆಯ ಜನಗಾಮ ಕ್ರಾಸ್ ರಸ್ತೆಯ ಬಳಿಯ ತನ್ನ ಜಮೀನಿನಲ್ಲಿ ವಡ್ಲಕೊಂಡ ಕೃಷ್ಣನನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ ನಂತರ ಶವವನ್ನು ಆರೋಪಿಗಳು ಕಾರಿನ ಡಿಕ್ಕಿಯಲ್ಲಿ ಹಾಕಿ ಬೆಳಗಿನವರೆಗೂ ಓಡಾಡಿದ್ದರು. ನಂತರ ಬಲಸಮರಿ ಕಾಲುವೆಯ ಏರಿ ಮೇಲೆ ಎಸೆದು ಹೋಗಿದ್ದರು. ಸೋಮವಾರ ಬೆಳಗ್ಗೆ ಏರಿ ಮೇಲೆ ಆತನ ಮೃತದೇಹ ಪತ್ತೆಯಾಗಿತ್ತು. ಈ ಹಿಂದೆಯೂ ಕೃಷ್ಣನನ್ನು ಕೊಲ್ಲು 3 ಬಾರಿ ಯತ್ನ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ" ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಕೊಲೆಯಲ್ಲಿ ಅಜ್ಜಿ ಬುಚ್ಚಮ್ಮಳ ಕೈವಾಡ: ಈ ಹತ್ಯೆಯ ಹಿಂದೆ ಬಾರ್ಘವಿಯ ಅಜ್ಜಿ ಬುಚ್ಚಮ್ಮಳ ಕೈವಾಡವಿರುವುದು ಪೊಲೀಸರನ್ನೇ ಅಚ್ಚರಿಗೊಳಿಸಿದೆ. ತಮ್ಮ ಮೊಮ್ಮಗಳು ಭಾರ್ಗವಿ ಹಾಗೂ ಕೃಷ್ಣನ ಮದುವೆಯನ್ನು ಆರಂಭದಿಂದಲೂ ವಿರೋಧಿಸಿದ್ದರು. ಕಳೆದ ಕೆಲವು ತಿಂಗಳುಗಳಿಂದ ತಮ್ಮ ಮಗ ಹಾಗೂ ಮೊಮ್ಮಕ್ಕಳನ್ನು ಕೃಷ್ಣನನ್ನು ಕೊಲೆ ಮಾಡುವಂತೆ ಪ್ರಚೋದಿಸಿದ್ದರು. ಈ ಹತ್ಯೆಗೆ ಪರೋಕ್ಷವಾಗಿ ಅವರೇ ಕಾರಣವಾಗಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕೊಲೆ ಮಾಡಿದ ಬಳಿಕ ಆರೋಪಿಗಳು ಕೃಷ್ಣನ ಮೃತದೇಹವನ್ನು ಆತ್ಮಕೂರ್(ಎಸ್) ಮಂಡಲದ ಹಳೆಯ ಸೂರ್ಯಪೇಟೆಯ ಸಂಬಂಧಿಕರ ಮನೆಯಲ್ಲಿದ್ದ ಅಜ್ಜಿ ಬುಚ್ಚಮ್ಮಳಿಗೆ ತೋರಿಸಿ ನಂತರ ಏರಿ ಮೇಲೆ ಎಸೆದಿದ್ದರು ಎಂಬ ವಿಚಾರವೂ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊಲೆ ಕೇಸಲ್ಲಿ ಜಾಮೀನಿನ ಮೇಲೆ ಹೊರಬಂದು ಮತ್ತಿಬ್ಬರ ಹತ್ಯೆ ಮಾಡಿದ ಆರೋಪಿ!