ನವದೆಹಲಿ: ಸಂವೇದನಾರಹಿತ, ಅನ್ಯಾಯ, ಅಕ್ರಮ ಮತ್ತು ಅನಿಯಂತ್ರಿತ ವಿಧಾನದ ಕಾರಣದಿಂದಾಗಿ ಎಂಬಿಬಿಎಸ್ ಕೋರ್ಸ್‌ನ ಮೊದಲ ವರ್ಷದ ಅರ್ಹ ಪ್ರವೇಶದಿಂದ ವಂಚಿತರಾದ ವಿದ್ಯಾರ್ಥಿಗೆ ಹೆಚ್ಚುವರಿ ಸೀಟು ಸೃಷ್ಟಿಸಿ, 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ವೈದ್ಯಕೀಯ ಕಾಲೇಜಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಮಹಾರಾಷ್ಟ್ರದ ಮೂಲದ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಯೋಧನ ಪುತ್ರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ರಾಜೇಶ್ ಬಿಂದಾಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಾರ್ಚ್ 20 ರಂದು ಈ ಆದೇಶ ನೀಡಿದೆ. ಅರ್ಜಿದಾರರಿಗೆ ವರ್ಷದ ಕೊರತೆ ಮತ್ತು ಅವರ ಪ್ರವೇಶಾತಿಯನ್ನು ಅಕ್ರಮ ಮತ್ತು ಅನಿಯಂತ್ರಿತ ರದ್ದತಿ ಕಾರಣಕ್ಕಾಗಿ ಸಂಬಂಧಪಟ್ಟ ಕಾಲೇಜು ಮತ್ತು ಮಹಾರಾಷ್ಟ್ರ ಸರ್ಕಾರವು 1 ಲಕ್ಷ ರೂ. (ತಲಾ 50,000 ರೂಪಾಯಿ) ಪರಿಹಾರ ನೀಡಬೇಕು ಎಂದು ಸೂಚಿಸಿದೆ.
ಎಂಬಿಬಿಎಸ್ (ಯುಜಿ) ಕೋರ್ಸ್‌ನ ಮೊದಲ ವರ್ಷದಲ್ಲಿ ಭಾರತ ಸರ್ಕಾರಕ್ಕೆ ಸೇವೆ ಸಲ್ಲಿಸುತ್ತಿರುವ ಮಹಾರಾಷ್ಟ್ರದ ವ್ಯಕ್ತಿಯ ಮಗನಿಗೆ ಹಿಂದುಳಿದ ವರ್ಗದ ಅಡಿ 2024ನೇ ಸಾಲಿನಲ್ಲಿ ಹೆಚ್ಚುವರಿ ಸ್ಥಾನವನ್ನು ಸೃಷ್ಟಿಸುವ ಮೂಲಕ ಪ್ರವೇಶಾತಿ ಒದಗಿಸಬೇಕು ಎಂದು ತಾಕೀತು ಮಾಡಿದೆ. ಹೆಚ್ಚುವರಿ ಸೀಟು ರಚಿಸುವಾಗ ನೀಟ್-2024ರಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳಿಗೆ ಸೀಟುಗಳ ಕೋಟಾದಲ್ಲಿ ಯಾವುದೇ ಕಡಿತ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
ತನ್ನ ತೀರ್ಪು ನೀಡುವಾಗ ನ್ಯಾಯ ಪೀಠವು, ಮೇಲ್ಮನವಿದಾರರ ಪ್ರವೇಶವನ್ನು ರದ್ದುಪಡಿಸುವ ಆದೇಶವನ್ನು 2023ರ ಆಗಸ್ಟ್ 9ರಂದು ಹೊರಡಿಸಲಾಗಿದೆ. ಯಾವುದೇ ವಿಳಂಬ ಮಾಡದೇ 2023ರ ಆಗಸ್ಟ್ 10ರಂದು ತಕ್ಷಣವೇ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂಬುದನ್ನೂ ಗಮನಿಸಿದೆ. ಅರ್ಜಿದಾರರು ಮುಂದಿನ ಅವಧಿ ಅಂದರೆ, ನೀಟ್ - ಯುಜಿ 2024ರಲ್ಲಿ ಅದೇ ಕಾಲೇಜಿನಲ್ಲಿ ಎಂಬಿಎಸ್ಎಸ್ (ಯುಜಿ) ಕೋರ್ಸ್‌ನ ಮೊದಲ ವರ್ಷದ ಸೀಟು ಮರುಸ್ಥಾಪಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.
ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ ಎಸ್‌ಎಸ್‌ಸಿ ಮತ್ತು/ಅಥವಾ ಹೆಚ್‌ಎಸ್‌ಸಿ ವಿದ್ಯಾರ್ಹತೆ ಪಡೆದಿರುವ ಮಹಾರಾಷ್ಟ್ರ ರಾಜ್ಯದ ಅಭ್ಯರ್ಥಿ(ಗಳು) ಮಾರ್ಗಸೂಚಿಗಳು/ನಿಯಮಗಳಲ್ಲಿ ಸೂಕ್ತವಾದ ತಿದ್ದುಪಡಿಯನ್ನು ಮಾಡುವವರೆಗೆ ನ್ಯಾಯ ಪೀಠ ಎರಡು ನಿರ್ದೇಶನಗಳನ್ನು ನೀಡಿದೆ. (i) ಪೋಷಕರು ಮಹಾರಾಷ್ಟ್ರದ ನಿವಾಸಿಗಳು ಮತ್ತು ಕೇಂದ್ರ ಸರ್ಕಾರ ಅಥವಾ ಅದರ ಅಂಡರ್ಟೇಕಿಂಗ್, ರಕ್ಷಣಾ ಸೇವೆಗಳು ಮತ್ತು/ಅಥವಾ ಸಿಆರ್ಪಿಎಫ್, ಬಿಎಸ್ಎಫ್, ಇತ್ಯಾದಿ ಅರೆಸೈನಿಕ ಪಡೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. (ii) ದಾಖಲೆ ಪರಿಶೀಲನೆಯ ಕೊನೆಯ ದಿನಾಂಕದಂದು ದೇಶದ ಯಾವುದೇ ಸ್ಥಳದಲ್ಲಿ ಅಂತಹ ಪೋಷಕರು ಪೋಸ್ಟ್ ಮಾಡಲ್ಪಟ್ಟಿದ್ದರೂ ಮಹಾರಾಷ್ಟ್ರ ರಾಜ್ಯ ಕೋಟಾದಲ್ಲಿ ಎಂಬಿಬಿಎಸ್ ಕೋರ್ಸ್‌ನಲ್ಲಿ ಸೀಟ್‌ಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಹೇಳಿದೆ.
ಏನಿದು ಪ್ರಕರಣ?: ಮಹಾರಾಷ್ಟ್ರದ ನಿವಾಸಿ ವಂಶ್ ಎಂಬುವರು ಬಾಂಬೆ ಹೈಕೋರ್ಟ್ನ ವಿಭಾಗೀಯ ಪೀಠವು ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರು ಮಹಾರಾಷ್ಟ್ರದ ನಿವಾಸಿಯಾಗಿದ್ದು, ಅವರ ತಂದೆ ಬಿಎಸ್ಎಫ್ನಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ತಂದೆಯನ್ನು ರಾಜ್ಯದ ಹೊರಗೆ ನಿಯೋಜಿಸಿದ್ದರಿಂದ 10ನೇ ಮತ್ತು 12ನೇ ತರಗತಿಯನ್ನು ಮಹಾರಾಷ್ಟ್ರದ ಹೊರಗಿನ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು.
2023ರಲ್ಲಿ ನೀಟ್-ಯುಜಿಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಅರ್ಹರೆಂದು ಕಂಡುಬಂದ ನಂತರ ಅವರಿಗೆ 2023ರ ಆಗಸ್ಟ್ 4ರಂದು ಮಹಾರಾಷ್ಟ್ರದ ರಾಜ್ಯ ಸಾಮಾನ್ಯ ಪ್ರವೇಶ ಕೋಶದಿಂದ ತಾತ್ಕಾಲಿಕ ಆಯ್ಕೆ ಪತ್ರ ಮತ್ತು ಕಾಲೇಜಿನಲ್ಲಿ ಸೀಟು ನೀಡಲಾಗಿತ್ತು. ಅಂತೆಯೇ, ಅಗತ್ಯವಿರುವ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ, ಪ್ರವೇಶ ಶುಲ್ಕದ 13,500 ರೂ.ಗಳನ್ನು ಪಾವತಿಸಿದ್ದರು.
ಮಹಾರಾಷ್ಟ್ರ ವಾಸಸ್ಥಳವಾಗಿರುವುದರಿಂದ ಇತರ ಹಿಂದುಳಿದ ವರ್ಗ/ಕೆನೆರಹಿತ ಪದರ (OBC/NCL) ವರ್ಗದ ಅಡಿಯಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸುವಾಗ ಮೇಲ್ಮನವಿದಾರರು ನಿರ್ದಿಷ್ಟಪಡಿಸಿದ ಮೀಸಲಾತಿಯನ್ನು ಅಂದರೆ ರಕ್ಷಣಾ ಸಿಬ್ಬಂದಿಯ ಮಕ್ಕಳ ವರ್ಗದಲ್ಲಿ (ಡಿಇಎಫ್) ಆಯ್ಕೆ ಮಾಡದ ಕಾರಣ, ಈ ಬಗ್ಗೆ ತಡವಾಗಿ ಹಕ್ಕನ್ನು ಎತ್ತದಂತೆ ಕಾರಣಕ್ಕೆ ಪ್ರವೇಶವನ್ನು ತಡೆಹಿಡಿಯಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್ ಮಾಹಿತಿ ಕರಪತ್ರದ ಷರತ್ತು 4.8 ಮತ್ತು 9.4.4ರ ಅವಶ್ಯಕತೆಗಳನ್ನು ಪೂರೈಸಲಿಲ್ಲ ಎಂದು ಹೇಳಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಇದನ್ನೂ ಓದಿ: ಲೋಕಾಯುಕ್ತ ನೇಮಕಾತಿ ಪ್ರಕ್ರಿಯೆ ಕುರಿತು ಪರಿಶೀಲನೆಗೆ ಮುಂದಾದ ಸುಪ್ರೀಂ : ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್